ಹಾವೇರಿ: ಜಾಗದ ವಿಚಾರವಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು 8 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಮಲಾಪುರ ತಾಂಡಾದಲ್ಲಿ ನಡೆದಿದೆ. ಈ ಪೈಕಿ ಓರ್ವ ಸ್ಥಿತಿ ಗಂಭೀರವಾಗಿದೆ. ಚಾಕು, ಕಲ್ಲು ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಗ್ರಾಮದ ಬಸ್ ನಿಲ್ದಾಣದ ವಿಚಾರವಾಗಿ ಘರ್ಷಣೆ ನಡೆದಿದೆ ಎಂದು ತಿಳಿದುಬಂದಿದೆ.
ಗಲಾಟೆಯಲ್ಲಿ ಓರ್ವ ಯುವಕ ಹಲವರಿಗೆ ಚಾಕುವಿನಿಂದ ಇರಿದಿದ್ದಾನೆ. ಕಲ್ಲು ಹೊಡೆದುಕೊಂಡು ಜಗಳವಾಡುವ ದೃಶ್ಯಗಳು ಲಭಿಸಿವೆ. ಓರ್ವನ ಎದೆಗೆ ಚಾಕು ಇರಿದು ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಹಲ್ಲೆಗೊಳಗಾದವರನ್ನು ರವಿ, ಶಂಕರ್, ರಾಜು, ಮಹೇಶ್, ಲಾಲಪ್ಪ, ಹನುಮಂತ ಹಾಗೂ ಅಕ್ಷಯ ಲಮಾಣಿ ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಯುವಕನ ಕೈ ಬೆರಳು ತುಂಡಾಗಿದೆ. ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಚಾಕು ಇರಿತಕ್ಕೊಳಗಾದ ಯುವಕ ಹಾಗೂ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರೇಶ್ ಲಮಾಣಿ ಎಂಬಾತ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ತಡಸ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಿಕ್ಕಿ ಯಾದವ್ ಹತ್ಯೆಗೆ ಬಿಗ್ ಟ್ವಿಸ್ಟ್: ಲಿವ್ ಇನ್ ಅಲ್ಲ, ವಿವಾಹಿತ ದಂಪತಿ.. ತಂದೆಗೆ ಗೊತ್ತಿತ್ತು ಮಗನ ಕೃತ್ಯ!
ಇಂತಹದ್ದೇ ಘಟನೆಯೊಂದು ದೊಡ್ಡಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದಿತ್ತು. ದೊಡ್ಡಬೆಳವಂಗಲ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಸಲುವಾಗಿ ಕ್ರಿಕೆಟ್ ಪಂದ್ಯಾಟ ಏರ್ಪಡಿಲಾಗಿತ್ತು. ಈ ವೇಳೆ ಯುವಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ಇಬ್ಬರು ಯುವಕರ ಕೊಲೆಯಲ್ಲಿ ಅಂತ್ಯಗೊಂಡಿತ್ತು.
ಫೆಬ್ರವರಿ 17 ರಂದು ಮಧ್ಯಾಹ್ನ 3 ಗಂಟೆ ವೇಳೆ ಕ್ರಿಕೆಟ್ ಪಂದ್ಯಾಟದ ಮೈದಾನದಲ್ಲಿ ಪಾರ್ಕಿಂಗ್ ವಿಚಾರದಲ್ಲಿ ದೊಡ್ಡಬೆಳವಂಗಲ ಮತ್ತು ಹುಲಿಕುಂಟೆ ಗ್ರಾಮದ ಯುವಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಲ್ಲಿಗೇ ಇತ್ಯರ್ಥಪಡಿಸದೇ ಬಸ್ ನಿಲ್ದಾಣಕ್ಕೆ ಬಂದು ಹೊಡೆದಾಡಿಕೊಂಡಿದ್ದರು. ಈ ವೇಳೆ ಇಬ್ಬರು ಯುವಕರಿಗೆ ಎದುರಾಳಿ ತಂಡದವರು ಗುಪ್ತಾಂಗ ಮತ್ತು ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದರು. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದರು.
ಇಬ್ಬರು ಯುವಕರನ್ನು ಕೊಲೆಗೈದ ಆರೋಪಿಗಳನ್ನು ಬಂಧಿಸುವಂತೆ ಮೃತ ಯುವಕರ ಕುಟುಂಬಸ್ಥರು ಫೆಬ್ರವರಿ 18 ರಂದು ಹೆದ್ದಾರಿ ತಡೆಹಿಡಿದು ಪ್ರತಿಭಟನೆ ನಡೆಸಿದ್ದರು. ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಲ್ಲದೇ, 24 ಗಂಟೆಯ ಒಳಗಾಗಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, "ಪೊಲೀಸರು ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆಯನ್ನು ನಡೆಸಲಿದ್ದಾರೆ. ಮೃತರ ಸಾವಿಗೆ ನ್ಯಾಯ ಕೊಡಿಸುತ್ತೇವೆ" ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ:ರೀಲ್ಸ್ಗಾಗಿ ಹೆದ್ದಾರಿಯಲ್ಲಿ ಪ್ರೇಮಿಗಳ ಬೈಕ್ ಸ್ಟಂಟ್ಸ್.. ಜೋಡಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಪೊಲೀಸರು