ರಾಣೆಬೆನ್ನೂರ: ಸಾಲಮನ್ನಾ ವಿಷಯದಲ್ಲಿ ಇಂಡಿಯನ್ ಬ್ಯಾಂಕ್ ರೈತರಿಗೆ ಮೋಸ ಮಾಡಿದೆ ಎಂದು ನಿನ್ನೆ ದಿನ ರೈತರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸುತ್ತಿರುವಾಗ, ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆದಿದೆ.
ತಾಲೂಕಿನ ಮಣಕೂರು, ಲಿಂಗದಹಳ್ಳಿ, ಅಂತರವಳ್ಳಿ, ಮಾಗೋಡ ಗ್ರಾಮದ ನೂರಾರು ರೈತರು ಬ್ಯಾಂಕ್ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಈ ಸಮಯದಲ್ಲಿ ಕೊರೊನಾ ನಡುವೆ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ರಾಣೆಬೆನ್ನೂರ ಶಹರ ಠಾಣೆ ಪೊಲೀಸರು ಮನವರಿಕೆ ಮಾಡಿದ್ದಾರೆ. ಈ ಬಗ್ಗೆ ಕ್ಯಾರೆ ಎನ್ನದ ರೈತರು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ಸಮಯದಲ್ಲಿ ಸಿಪಿಐ, ಎಸ್ಐ ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ರೈತರನ್ನು ಪ್ರತಿಭಟನೆ ಸ್ಥಳದಿಂದ ಬಲವಂತವಾಗಿ ಎಬ್ಬಿಸಲು ಮುಂದಾಗಿದ್ದಾರೆ.
ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೇ ಸುಮಾರು 30 ಕ್ಕೂ ಹೆಚ್ಚು ರೈತರ ಮೇಲೆ ಪ್ರಕರಣ ದಾಖಲಿಸಿದ್ದಾರೆ.