ಹಾವೇರಿ: ಬೆಂಗಳೂರು ಸೇರಿದಂತೆ ರಾಜ್ಯದ ನಗರ, ಪುರಸಭೆ, ಪಟ್ಟಣ ಆಡಳಿತಗಳು ಕಸ ವಿಲೇವಾರಿ ಸಮಸ್ಯೆ ಎದುರಿಸುತ್ತಿದ್ದರೆ, ಜಿಲ್ಲೆಯ ಬ್ಯಾಡಗಿ ಪುರಸಭೆ ಮಾತ್ರ, ನಗರದಲ್ಲಿ ಸಂಗ್ರಹವಾಗುವ ಕಸ ವಿಂಗಡಣೆ ಮಾಡಿ ಸಾವಯವ ಮತ್ತು ಎರೆಹುಳು ಗೊಬ್ಬರ ತಯಾರಿಸುತ್ತಿದೆ. ಈ ಮೂಲಕ ಕಸದ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಂಡಿದೆ.
ಬ್ಯಾಡಗಿ ಪಟ್ಟಣದಲ್ಲಿ ನಿತ್ಯ 9 ಟನ್‌ಗಳಷ್ಟು ಕಸ ಉತ್ಪಾದನೆಯಾಗುತ್ತದೆ. ಈ ಕಸದಲ್ಲಿನ ಅಪಾಯಕಾರಿ ವಸ್ತುಗಳನ್ನು ತೆಗೆದು, ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಲಾಗುತ್ತದೆ. ಇವುಗಳಿಂದ ಸಾವಯವ ಮತ್ತು ಎರೆಹುಳು ಗೊಬ್ಬರ ತಯಾರಿಸಲಾಗುತ್ತಿದೆ. ಇದೀಗ, ಕಳೆದ 13 ವರ್ಷಗಳಿಂದ ಸುರಿದ ಕಸದಿಂದ ಉಂಟಾದ ಗುಡ್ಡೆಯಲ್ಲಿ, ಫಲವತ್ತಾದ ಮಣ್ಣು ಸಿದ್ದಗೊಂಡಿದೆ. ಈ ಮಣ್ಣನ್ನ ಬೆಂಗಳೂರು ಹೆಬ್ಬಾಳದ ಕೃಷಿ ವಿವಿಗೆ ಕಳಿಸಿ ಫಲವತ್ತತೆ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ ಮಣ್ಣು ಅತ್ಯಂತ ಫಲವತ್ತತೆಯಿಂದ ಕೂಡಿರುವುದಾಗಿ ತಿಳಿದು ಬಂದಿದ್ದು, ತೆಂಗು, ಅಡಿಕೆ ಕೃಷಿಗೆ ಉಪಯೋಗಿಯಾಗಿದೆ. ಹೀಗಾಗಿ, ಈ ಮಣ್ಣಿನ ಗುಡ್ಡೆಯಿಂದ ಸಾವಯವ ಗೊಬ್ಬರ ಉತ್ಪಾದಿಸಲಾಗುತ್ತಿದೆ. ಅಲ್ಲದೇ, ತ್ಯಾಜ್ಯವಿಲೇವಾರಿ ಘಟಕದಲ್ಲಿ ಎರೆಹುಳು ಗೊಬ್ಬರ ಉತ್ಪಾದನೆಗೂ ಘಟಕ ಸಿದ್ದಪಡಿಸಲಾಗಿದೆ. ಒಟ್ಟು 18 ಬ್ಲಾಕ್‌ಗಳಲ್ಲಿ ಈ ಎರೆಹುಳು ಗೊಬ್ಬರ ತಯಾರಿಸಲಾಗುತ್ತದೆ.
ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಉತ್ಪಾದನೆಯಾಗುವ ಸಾವಯವ ಗೊಬ್ಬರವನ್ನು ಪುರಸಭೆ ಕೆಜಿಗೆ ಮೂರು ರೂಪಾಯಿಯಂತೆ ರೈತರಿಗೆ ಮಾರಾಟ ಮಾಡುತ್ತಿದೆ. ಮನೆಗೆ ಗೊಬ್ಬರ ವಿತರಣೆ ಮಾಡಬೇಕಾದರೆ ಕೆಜಿಗೆ 5 ರೂಪಾಯಿ ನಿಗದಿಪಡಿಸಲಾಗಿದೆ. ಪುರಸಭೆ ಉತ್ಪಾದಿಸುವ ಸಾವಯವ ಗೊಬ್ಬರಕ್ಕೆ ಅಧಿಕ ಬೇಡಿಕೆ ಇದ್ದು, ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ರೈತರು ಕೂಡ ಈ ಗೊಬ್ಬರ ಖರೀದಿಗೆ ಆಗಮಿಸುತ್ತಿದ್ದಾರೆ. ನಗರ, ಪಟ್ಟಣಗಳು ಕಸದ ಸಮಸ್ಯೆಯಿಂದ ಬಳಲುತ್ತಿರುವ ಈ ದಿನಗಳಲ್ಲಿ ಬ್ಯಾಡಗಿ ಪುರಸಭೆಯ ಈ ಕಾರ್ಯ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.