ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 7 ಗಂಟೆಗೆ ತೆರೆ ಬೀಳಲಿದೆ. ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾನಗಲ್ ತಾಲೂಕಿನ ಗ್ರಾಮಗಳಲ್ಲಿ ಭರ್ಜರಿ ಬಹಿರಂಗ ಪ್ರಚಾರ ನಡೆಸಿದರು.
ಕೊಪ್ಪರಸಿಕೊಪ್ಪ ಆಡೂರು ಮತ್ತು ಉಪ್ಪುಣಸಿಯಲ್ಲಿ ಮತಬೇಟೆ ನಡೆಸಿದ ಸಿಎಂ, ಕಾಂಗ್ರೆಸ್ ಅಡಳಿತವಿದ್ದಾಗ ಐದು ವರ್ಷಗಳ ಕಾಲ ಹಾನಗಲ್ ಕಾಂಗ್ರೆಸ್ ನಾಯಕರಿಗೆ ಕಾಣಲಿಲ್ಲ. ಆದರೆ ಉಪಚುನಾವಣೆ ಬರುತ್ತಿದ್ದಂತೆ ಹಾನಗಲ್ ಕ್ಷೇತ್ರ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಈ ಹಿಂದೆ ಶಾಸಕರಾಗಿದ್ದ ಸಿಎಂ ಉದಾಸಿ ಕ್ಷೇತ್ರಕ್ಕೆ 425 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಕ್ಷೇತ್ರದ ರಸ್ತೆಗಳು, ಕೆರೆಗಳು ಉದಾಸಿ ಹೆಸರನ್ನು ನೆನಪಿಸುತ್ತವೆ. ಆದ್ರೆ ಕಾಂಗ್ರೆಸ್ ಸರ್ಕಾರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಸಿಂದಗಿ, ಹಾನಗಲ್ ಉಪಚುನಾವಣೆ: ಬಹಿರಂಗ ಪ್ರಚಾರ ಇಂದು ಅಂತ್ಯ
'ಕಣ್ಣನ್ ದೇವನ್ ಚಹಾಪುಡಿ ಕಾಂಗ್ರೆಸ್ ಪಾರ್ಟಿ ಪುಡಿಪುಡಿ'
ಕೊರೊನಾ ಕಾಲದಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಿದ್ದರಿಂದ ಕೊರೊನಾ ನಿಯಂತ್ರಣದಲ್ಲಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶ್ರೀನಿವಾಸ ಮಾನೆ ಚುನಾವಣೆಗಾಗಿ ಕೊರೊನಾ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು. ಇದೇ ಸಂದರ್ಭದಲ್ಲಿ ಕಣ್ಣನ್ ದೇವನ್ ಚಹಾಪುಡಿ ಕಾಂಗ್ರೆಸ್ ಪಾರ್ಟಿ ಪುಡಿಪುಡಿ ಎಂದು ಲೇವಡಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರನ್ನು ಶಾಸಕರನ್ನಾಗಿ ಮಾಡಿದರೆ ಹಾನಗಲ್ ತಾಲೂಕನ್ನು ಮಾದರಿ ತಾಲೂಕಾಗಿ ಮಾಡುವುದಾಗಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.