ಹಾವೇರಿ: ಏಲಕ್ಕಿ ನಾಡು, ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯಲ್ಲಿ ಲಾಕ್ಡೌನ್ ನಿಯಮಾವಳಿ ಸಡಿಲಿಕೆಯಾದ ನಂತರ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ.
ಲಾಕ್ಡೌನ್ ಆರಂಭದಿಂದಲೂ ನಗರದಲ್ಲಿ ಬೈಕ್ ಮತ್ತು ಕಾರುಗಳ ಓಡಾಟ ತುಂಬಾ ವಿರಳವಾಗಿತ್ತು. ಈಗ ಲಾಕ್ಡೌನ್ ನಿಯಮಗಳಲ್ಲಿ ಸಡಿಲಿಕೆಯಾದ ನಂತರ ಕಾರು ಮತ್ತು ಬೈಕ್ಗಳ ಓಡಾಟ ಹೆಚ್ಚಳವಾಗಿದೆ. ದಿನಸಿ ಅಂಗಡಿಗಳು, ಆಟೋಮೊಬೈಲ್ಸ್, ಎಲೆಕ್ಟ್ರಿಕಲ್ಸ್ ಸೇರಿದಂತೆ ಬಹುತೇಕ ಅಂಗಡಿಗಳು ಒಂದೊಂದಾಗಿ ಓಪನ್ ಆಗುತ್ತಿವೆ. ಸರ್ಕಾರಿ ಬಸ್ ಸಂಚಾರ, ಆಟೋ ರಿಕ್ಷಾ ಮತ್ತು ಖಾಸಗಿ ವಾಹನಗಳ ಓಡಾಟ ಜೋರಾಗಿದೆ.
ಆದರೆ ಬೈಕ್ನಲ್ಲಿ ಒಬ್ಬರಿಗೆ ಮಾತ್ರ ಓಡಾಡಲು ಅವಕಾಶ ಮಾಡಿ ಕೊಡಲಾಗಿದೆ. ಅಲ್ಲದೆ ದಿನಸಿ ಅಂಗಡಿ ಸೇರಿದಂತೆ ಬಹುತೇಕ ಅಂಗಡಿಗಳ ಮುಂದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ಮಾಡಲಾಗುತ್ತಿದೆ. ನಗರ ಪ್ರವೇಶಿಸುವ ವಾಹನಗಳನ್ನು ತಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ರೂಲ್ಸ್ ಬ್ರೇಕ್ ಮಾಡಿ ಸುತ್ತಾಡುತ್ತಿರುವವರಿಗೆ ದಂಡ ಹಾಕಿ ಬಿಸಿ ಮುಟ್ಟಿಸುತ್ತಿದ್ದಾರೆ. ಆದ್ರೆ ಲಾಕ್ಡೌನ್ ನಿಯಮಾವಳಿ ಸಡಿಲಿಕೆ ಬಗ್ಗೆ ಇನ್ನೂ ಜಿಲ್ಲಾಡಳಿತ ಮಾಹಿತಿ ನೀಡಿಲ್ಲ.