ಹಾವೇರಿ: ದನ ಬೆದರಿಸುವ ಸ್ಪರ್ಧೆಯಲ್ಲಿ 6 ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ಬಸಾಪುರದಲ್ಲಿ ಸೋಮವಾರ ನಡೆದಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
58 ವರ್ಷದ ಮೈಲಾರೆಪ್ಪ ಗಜ್ಜಿ ಮತ್ತು ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದನ ಬೆದರಿಸುವ ಸ್ಪರ್ಧೆಯಲ್ಲಿ ಅಖಾಡಕ್ಕೆ ಬಿಟ್ಟ ಹೋರಿ ಮೈಲಾರಪ್ಪನನ್ನ ಕೊಂಬಿನಿಂದ ತಿವಿದು ಮೇಲಕ್ಕೆತ್ತಿ ಕೆಳಕ್ಕೆ ಒಗೆದಿದೆ. ಇದೇ ಸಂದರ್ಭದಲ್ಲಿ ಕೆಲ ಹೋರಿಗಳು ಬೆದರಿ ಓಡಾಡಿದ ಪರಿಣಾಮ 6ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎರಡು ಎತ್ತುಗಳು ಸಹ ಗಾಯಗೊಂಡಿವೆ. ಹೋರಿ ಬಿಡುವ ಅಖಾಡದಲ್ಲಿ ಹಿಂದಿನಿಂದ ಬಂದ ಹೋರಿಗಳು ಗೇಟು ಜಿಗಿದ ಕಾರಣ ಗಾಯಗೊಂಡಿವೆ. ಅಲ್ಲದೇ ಸ್ಪರ್ಧೆ ಆಯೋಜಿಸಿದ್ದ ನಾಲ್ವರನ್ನ ಗಾಯಗೊಳಿಸಿವೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಡಿಯೋ: ಬೆದರಿದ ಹೋರಿ ಕೊಂಬಿನಿಂದ ತಿವಿದು ದಾಳಿ ಮಾಡುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹಾಗೆಯೇ ಬೇರೆ ದನಗಳು ಬೆದರಿ ಓಡಾಡುತ್ತಿರುವುದು ವಿಡಿಯೋದಲ್ಲಿದೆ.
(ಇದನ್ನೂ ಓದಿ: ಒಟ್ಟಿಗೆ ಹಸೆಮಣೆ ಏರಿದ 6 ಸಹೋದರಿಯರು... 3 ಗ್ರಾಮಗಳಿಂದ ಬಂದ ಬೀಗರಿಗೆ ಇಡೀ ಊರೇ ಸ್ವಾಗತ!)