ಹಾವೇರಿ: ರಾಣೆಬೆನ್ನೂರಿನ ಹುಲಿ ಎಂದೇ ಪ್ರಸಿದ್ಧಿ ಪಡೆದಿದ್ದ ಹೋರಿಯೊಂದು ದಶಕಗಳ ಕಾಲ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ತನ್ನದೇ ವರ್ಚಸ್ಸು ಹೊಂದಿತ್ತು. ಸುಮಾರು 25 ತೊಲೆ ಬಂಗಾರ, ಒಂದೂವರೆ ಕೆಜಿ ಬೆಳ್ಳಿ, 17 ಬೈಕ್, 20 ತಿಜೋರಿ, 15 ಕಾಟ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಆದರೀಗ ಈ ಹೋರಿ ಇಹಲೋಕ ತ್ಯಜಿಸಿದ್ದು, ಮಾಲೀಕ ಸೇರಿದಂತೆ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ಹೋರಿಗೆ ವಿದಾಯ ಹೇಳಿದ್ದಾರೆ.
ಸ್ವಂತ ಮಗನಂತೆ ಸಾಕಿದ್ದ ಹೋರಿ ಭಾನುವಾರ ಅನಾರೋಗ್ಯದಿಂದ ಮೃತಪಟ್ಟಿದ್ದು, ಮಾಲೀಕ ದೆವ್ವ ಮರಿಯಪ್ಪರಿಗೆ ಮನೆಯ ಸದಸ್ಯನನ್ನೇ ಕಳೆದುಕೊಂಡಷ್ಟು ದುಃಖ ತಂದಿತ್ತು. ತನ್ನ ಹೆಸರನ್ನು ಖ್ಯಾತಿಗೊಳಿಸಿದ ಹೋರಿಯ ಅಂತ್ಯಕ್ರಿಯೆಯನ್ನು ಮನುಷ್ಯರ ಅಂತ್ಯಕ್ರಿಯೆಯಂತೆ ಮಾಡುವ ಮೂಲಕ ಮಾಲೀಕ ಮರಿಯಪ್ಪ ಪ್ರಾಣಿ ಪ್ರೇಮ ಮೆರೆದಿದ್ದಾರೆ. ರಾಣೆಬೆನ್ನೂರು ಹುಲಿಯ ಋಣ ತೀರಿಸಲು ನನ್ನಿಂದ ಸಾಧ್ಯವಿಲ್ಲ, ಈ ರೀತಿಯಾದರೂ ಕೊಂಚ ಋಣ ತೀರಿಸುವುದಾಗಿ ಹೋರಿ ಮಾಲೀಕ ದೆವ್ವ ಮರಿಯಪ್ಪ ಬಿಕ್ಕಿ ಬಿಕ್ಕಿ ಅತ್ತರು.
ಕಳೆದ 10 ವರ್ಷಗಳ ಕಾಲ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಖ್ಯಾತಿ ಗಳಿಸಿದ ರಾಣೆಬೆನ್ನೂರು ಹುಲಿಗೆ ಸಾವಿರಾರು ಅಭಿಮಾನಿಗಳಿದ್ದರು. ಹೋರಿ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಬಂದು ಸೇರಿ, ತಮ್ಮ ನೆಚ್ಚಿನ ಹೋರಿಗೆ ಕಣ್ಣೀರಿನ ವಿದಾಯ ಹೇಳಿದರು.
ಈ ಸುದ್ದಿಯನ್ನೂ ಓದಿ: ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳ ಪ್ರಗತಿಯಲ್ಲಿ ಕಳಪೆ ಪ್ರದರ್ಶನ : ವಾರ್ಷಿಕ ಗುರಿ ಸಾಧಿಸುವಲ್ಲಿ ಸರ್ಕಾರ ವಿಫಲ!
ಹೋರಿಯ ಶವವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು. ನಂತರ ಮನುಷ್ಯರ ಅಂತ್ಯಕ್ರಿಯೆ ನಡೆಸುವಂತೆ ತೆರೆದ ವಾಹನದಲ್ಲಿ ರಾಣೆಬೆನ್ನೂರು ಹುಲಿಯನ್ನು ಮೆರವಣಿಗೆ ಮಾಡಲಾಯಿತು. ನಂತರ ದೆವ್ವ ಮರಿಯಪ್ಪರ ಗುಡ್ಡದ ಅನ್ವೇರಿಯ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಮನೆಯ ಸದಸ್ಯರು, ಸಾವಿರಾರು ಅಭಿಮಾನಿಗಳು ಪಾಲ್ಗೊಂಡು ಭಾವುಕರಾದರು.