ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಪಟ್ಟಣ ಶುಕ್ರವಾರ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು. ಗಂಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹದಲ್ಲಿ ಸ್ವಯಂಪ್ರೇರಿತ ರಕ್ತದಾನ ನಡೆಯಿತು. ಮದುವೆಗೆ ಬಂದಿದ್ದ ಬಂಧುಮಿತ್ರರು ಮತ್ತು ಸ್ನೇಹಿತರು ವಧುವರರಿಗೆ ಅಕ್ಷತೆ ಹಾಕಿ ರಕ್ತದಾನ ಮಾಡಿದ್ದಾರೆ. ವಿಶೇಷವಾಗಿ ಮದುಮಗ ಪ್ರವೀಣ ಖುದ್ದು ರಕ್ತದಾನ ಮಾಡಿ ವಿಭಿನ್ನವಾಗಿ ತಮ್ಮ ಮದುವೆ ಮಾಡಿಕೊಂಡರು. ಮಧುಮಗಳು ಸಾವಿತ್ರಿ ಕೂಡಾ ರಕ್ತದಾನ ಮಾಡಿದ್ದಾರೆ.
ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 50ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ಪ್ರವೀಣ ಮಾತನಾಡಿ, ಮದುವೆಯಲ್ಲಿ ಈ ರೀತಿ ರಕ್ತದಾನ ಶಿಬಿರ ಏರ್ಪಡಿಸುವುದಕ್ಕೆ ಕಾರಣವಿದೆ. ಕೊರೊನಾ ಸಮಯದಲ್ಲಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದೆ. ಈ ವೇಳೆ ರಕ್ತದ ಅನಿವಾರ್ಯತೆ ಇತ್ತು. ರಕ್ತ ನೀಡುವುದಿರಲಿ, ನನ್ನನ್ನು ಆಸ್ಪತ್ರೆಗೆ ಸೇರಿಸುವವರೂ ಸಹ ಇರಲಿಲ್ಲ. ನಾನು ಸಾವು ಮತ್ತು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ನನ್ನ ನೆರವಿಗೆ ಬಂದಿದ್ದು ಅಕ್ಕಿ ಆಲೂರಿನ ಸ್ನೇಹಮೈತ್ರಿ ಮತ್ತು ಬ್ಲಡ್ ಆರ್ಮಿ ತಂಡ. ಆ ದಿನ ಅವರು ಬಂದು ಕಾಪಾಡದಿದ್ದರೆ ಇಂದು ನಾನು ಬದುಕುತ್ತಿರಲಿಲ್ಲ ಎಂದರು.
ದೇಶದಲ್ಲಿ ಪ್ರತಿನಿತ್ಯ ನೂರಾರು ಅಪಘಾತಗಳು ನಡೆಯುತ್ತವೆ. ಅದೇ ರೀತಿ ಹೆರಿಗೆಗಳೂ ನಡೆಯುತ್ತವೆ. ಈ ಸಂದರ್ಭದಲ್ಲಿ ರಕ್ತದ ಅನಿರ್ವಾಯತೆ ಹೆಚ್ಚಿರುತ್ತದೆ. ಆದರೆ ಸೂಕ್ತ ಸಮಯಕ್ಕೆ ರಕ್ತ ಸಿಗದೆ ಎಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಈ ರೀತಿಯಾಗಬಾರದು, ಅವಶ್ಯಕತೆ ಇದ್ದಾಗ ಪ್ರತಿಯೊಬ್ಬರಿಗೂ ರಕ್ತ ಸಿಗಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರನ್ನೂ ರಕ್ತಸೈನಿಕರನ್ನಾಗಿ ಮಾಡಬೇಕು. ರಕ್ತದಾನದ ಮಹತ್ವ ಸಾರಲು ನನ್ನ ಮದುವೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದೇನೆ. ಸ್ವತಃ ನಾನೇ ರಕ್ತದಾನ ಮಾಡುವ ರಕ್ತದಾನದ ಬಗ್ಗೆ ಹಲವು ಮೂಡನಂಬಿಕೆ ಹೋಗಲಾಡಿಸಿದ್ದೇನೆ ಎಂದು ಪ್ರವೀಣ ತಿಳಿಸಿದರು.
ಇವರು ಮದುವೆಯಲ್ಲಿ ಮಾತ್ರ ರಕ್ತದಾನದ ಮಹತ್ವ ತಿಳಿಸುತ್ತಿಲ್ಲ. ಮದುವೆ ಆಮಂತ್ರಣ ಪತ್ರಿಕೆಯಲ್ಲಿಯೂ ಸಹ ರಕ್ತದಾನದ ಮಹತ್ವ ಸಾರಿದ್ದಾರೆ. ಅಕ್ಕಿಆಲೂರು ಪಟ್ಟಣ ಗೂಗಲ್ ಮ್ಯಾಪ್‌ನಲ್ಲಿ ರಕ್ತದಾನಿಗಳ ತವರೂರು ಎಂದು ಪ್ರಸಿದ್ಧಿ ಪಡೆದಿದೆ. ಈ ಪಟ್ಟಣದಲ್ಲಿ ರಕ್ತದಾನದ ಮೂಲಕ ಮದುವೆ ಮಾಡಿಕೊಳ್ಳುತ್ತಿರುವುದಕ್ಕೆ ಪ್ರವೀಣ ಸಂತಸ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲಾ ಆಸ್ಪತ್ರೆಯ ರಕ್ತದಾನ ಭಂಡಾರದ ವೈದ್ಯರು ಮತ್ತು ಸಿಬ್ಬಂದಿ ರಕ್ತದಾನ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯರು, ಪಟ್ಟಣದಲ್ಲಿ ಸ್ನೇಹಮೈತ್ರಿ ಬಳಗ ಮತ್ತು ಬ್ಲಡ್ ಆರ್ಮಿ ತಂಡ ಈಗಾಗಲೇ ಸಾವಿರಾರು ಜನರನ್ನು ರಕ್ತದಾನಿಗಳಾನ್ನಾಗಿಸಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿ ಒಬ್ಬ ರಕ್ತದಾನಿ ಇಕಬೇಕು ಎನ್ನುವುದು ತಂಡದ ಗುರಿ. ಆದಷ್ಟು ಬೇಗ ಜನರು ರಕ್ತದಾನದ ಮಹತ್ವ ತಿಳಿಯಬೇಕು. ರಕ್ತದಾನ ಮಾಡುವುದರಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳಿವೆ ಎಂದರು.
ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 50ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. 10 ಮಂದಿ ರಕ್ತದಾನಿಗಳು ಇದೇ ಪ್ರಥಮ ಬಾರಿಗೆ ರಕ್ತದಾನ ಮಾಡಿದರು. ಮದುವೆಗೆ ಬಂದ ಅರ್ಚಕರು ಸಹ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಮಗಳ ಮದ್ವೆ ಹೇಳಿಕೆ ಜೊತೆ ತರಕಾರಿ ಬೀಜದ ಪ್ಯಾಕೆಟ್; ಪೋಷಕರಿಂದ ಪರಿಸರ ಜಾಗೃತಿ ಸಂದೇಶ