ಹಾವೇರಿ: ಟಿಕೆಟ್ ಹಂಚಿಕೆ ಕುರಿತಂತೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಹಂತದ ಕೆಲಸ ಆರಂಭವಾಗಿದ್ದು, ಇದರ ಬೆನ್ನಲ್ಲೇ ಬಿಜೆಪಿಯ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ವದಂತಿ ಹರಿದಾಡುತ್ತಿದೆ. ಹಾವೇರಿ ಶಾಸಕ ನೆಹರು ಓಲೇಕಾರ್ ಕೂಡಾ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದು, ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ.
ಇದರ ಕುರಿತಂತೆ ಈಟಿವಿ ಭಾರತದೊಂದಿಗೆ ಮಾತನಾಡಿದ ನೆಹರು ಓಲೇಕಾರ್, ಈ ಸಮಸ್ಯೆ ಏಕೆ ಉದ್ಬವವಾಗಿದೆ ಎಂಬುದು ತಿಳಿಯುತ್ತಿಲ್ಲ. ಹೈಕಮಾಂಡ್‌ಗೆ ನನ್ನ ಮೇಲೆ ಆತ್ಮವಿಶ್ವಾಸವಿದೆ. ಯಾವುದೇ ಕಾರಣಕ್ಕೂ ನನಗೆ ಟಿಕೆಟ್ ಮಿಸ್ಸಾಗಲ್ಲ. ನಾನು ಮೂರಿ ಬಾರಿ ಭಾರತೀಯ ಜನತಾ ಪಕ್ಷದ ಶಾಸಕನಾಗಿದ್ದೇನೆ. ಒಂದು ಬಾರಿ ಬ್ಯಾಡಗಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದೇನೆ. ಮತ್ತೆ ಎರಡು ಬಾರಿ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದೇನೆ. ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಮಾತನಾಡುತ್ತಿವೆ. ಈ ರೀತಿ ಇರುವಾಗ ಕೆಲವು ವ್ಯಕ್ತಿಗಳು ತಾವು ಚುನಾವಣೆಗೆ ನಿಲ್ಲಬೇಕು ಎಂಬ ಮಹದಾಸೆಯಿಂದ ಊಹಾಪೋಹಗಳನ್ನು ಹರಿಬಿಡುತ್ತಿದ್ದಾರೆ ಎಂದರು.
ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತೆ: ಕೆಲವು ಟಿಕೆಟ್ ಅಕಾಂಕ್ಷಿಗಳು ಈ ರೀತಿಯ ವದಂತಿ ಹಬ್ಬಿಸುತ್ತಿದ್ದು, ಟಿಕೆಟ್ ಕೇಳುವುದು ಅವರ ಹಕ್ಕು. ಹಾವೇರಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪ್ರಾಮಾಣಿಕ ಕೆಲಸ ಮಾಡಿದ್ದರಿಂದ ಹೈಕಮಾಂಡ್‌ಗೆ ನನ್ನ ಮೇಲೆ ಅಪಾರ ಗೌರವವಿದೆ. ನಾನು ಸಹ ಹೈಕಮಾಂಡ್ ಮೇಲೆ ಅಷ್ಟೇ ಗೌರವ ಹೊಂದಿದ್ದೇನೆ. ಹೀಗಾಗಿ ನನಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಓಲೇಕಾರ ವಿಶ್ವಾಸ ವ್ಯಕ್ತಪಡಿಸಿದರು.
ಬೇರೆ ಯಾವ ಹಾಲಿ ಶಾಸಕರಿಗೆ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ನನಗೆ ಮಾತ್ರ ಟಿಕೆಟ್ ಸಿಗುತ್ತೆ. ಯಾವುದೇ ಗೊಂದಲವಿಲ್ಲ. ರಾಜಕೀಯದಲ್ಲಿ ಇದೆಲ್ಲ ಸಹಜ, ನಮಗೆ ಪರ ಇರುವಂತವರು, ವಿರೋಧ ಇರುವಂತವರು ಇದ್ದೇ ಇರುತ್ತಾರೆ. ವಿರೋಧಿಗಳು ಯಾವಾಗಲೂ ಸುಳ್ಳು ಸುದ್ದಿಗಳನ್ನು ಹರಿದು ಬಿಡುವುದು ಚಾಳಿ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ನಾಗರಾಜ್ ಛಬ್ಬಿ: ದೆಹಲಿಯಲ್ಲಿ ಪಕ್ಷ ಸೇರ್ಪಡೆ