ಹಾವೇರಿ: ಒಬ್ಬ ಹಿಂದೂವಿಗೆ ರಾಮ ಮಂದಿರ ಎಷ್ಟು ಪವಿತ್ರವೋ ಹಾಗೇ ಒಬ್ಬ ಬಿಜೆಪಿ ಕಾರ್ಯಕರ್ತನಿಗೆ ಬಿಜೆಪಿ ಕಾರ್ಯಾಲಯ ಅಷ್ಟೇ ಪವಿತ್ರವಾದ್ದದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಂದು ಕಾಲದಲ್ಲಿ ಕಾಂಗ್ರೆಸ್ನಿಂದ ವಿದ್ಯುತ್ ಕಂಬ ನಿಲ್ಲಿಸಿದರೂ ಗೆಲ್ಲುತ್ತೆ ಎನ್ನುವ ಭಾವನೆ ಇತ್ತು. ಆದರೆ ಇಂದು ಎಷ್ಟು ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಾಲಯಗಳಿಲ್ಲ ಎಂದು ಲೇವಡಿ ಮಾಡಿದರು. ರಾಹುಲ್ ಗಾಂಧಿಯೇ ತಮ್ಮ ಕ್ಷೇತ್ರ ಬಿಟ್ಟು ಕೇರಳಕ್ಕೆ ಬರುವ ಪರಿಸ್ಥಿತಿಯನ್ನು ಕಾಂಗ್ರೆಸ್ ತಲುಪಿದೆ. ಸೋನಿಯಾ ಗಾಂಧಿ ಅಧ್ಯಕ್ಷೆ ಸ್ಥಾನದಿಂದ ಹಿಂದೆ ಸರಿಯುವ ಪರಿಸ್ಥಿತಿ ಇದೆ. ಅಧ್ಯಕ್ಷರಿಲ್ಲದ ಪಕ್ಷ ಕಾಂಗ್ರೆಸ್ ಆಗಿದೆ ಎಂದು ಕಟೀಲ್ ಅಭಿಪ್ರಾಯಪಟ್ಟರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡುವುದಕ್ಕೆ ಹರ್ಷವಾಗುತ್ತದೆ. ಇಡೀ ಜಗತ್ತಿನಲ್ಲಿ ವಿಶಿಷ್ಟವಾದ ಪಕ್ಷ ಬಿಜೆಪಿ. ಎಲ್ಲ ಪಕ್ಷಗಳು ಕಷ್ಟದಲ್ಲಿವೆ, ಗೊಂದಲದಲ್ಲಿವೆ. ಇಂತಹ ಗೊಂದಲಗಳಿರುವ ಪಕ್ಷಗಳಿಂದ ದೇಶದ ಹಿತದ ಬಗ್ಗೆ ಚಿಂತನೆ ಮಾಡುವ ಸಮಯವಿಲ್ಲ. ಇಂದು ಭವಿಷ್ಯ ಇರುವ ಯಾವುದಾದರೂ ಪಕ್ಷವಿದ್ದರೇ ಅದು ಬಿಜೆಪಿ ಮಾತ್ರ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಶಿವಕುಮಾರ್ ಉದಾಸಿ, ಕೃಷಿ ಸಚಿವ ಬಿ. ಸಿ. ಪಾಟೀಲ್ ಸೇರಿದಂತೆ ಶಾಸಕರು, ಮಾಜಿ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.