ಹಾವೇರಿ: ಇಂದು ಕರ್ನಾಟಕದ ಕಬೀರ ಎಂದೇ ಖ್ಯಾತಿ ಪಡೆದ ಸಂತ ಶಿಶುನಾಳ ಶರೀಫರ ಜನ್ಮದಿನ. ಈ ಹಿನ್ನೆಲೆ ಜಿಲ್ಲೆಯಲ್ಲಿ ಅವರ ಜಯಂತಿ ಮತ್ತು ಪುಣ್ಯಸ್ಮರಣೋತ್ಸವವನ್ನ ಅದ್ಧೂರಿಯಾಗಿ ಆಚರಿಸಲಾಯಿತು.
ಶರೀಫರು ಜನಿಸಿದ್ದು ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುವಿನಾಳದಲ್ಲಿ. ಹಜರತ್ ಸಾಬ್ ಮತ್ತು ಹಜ್ಜೂಮಾ ದಂಪತಿಯ ಮಗನಾದ ಶರೀಫರು ಜನಿಸಿದ್ದು 1819 ಜುಲೈ 3ರಂದು. ವಿಚಿತ್ರ ಅಂದ್ರೆ ಅವರು ಸಾವನ್ನಪ್ಪಿದ್ದು ಸಹ ಜುಲೈ ಮೂರರಂದು. ಈ ಹಿನ್ನೆಲೆ ಅವರ ಜಯಂತಿ ಮತ್ತು ಪುಣ್ಯಸ್ಮರಣೋತ್ಸವವನ್ನ ಒಟ್ಟಿಗೇ ಆಚರಿಸಲಾಗುತ್ತಿದೆ.
ಶಿಶುನಾಳ ಶರೀಫರು ಗುರು ಗೋವಿಂದಭಟ್ಟರ ಶಿಷ್ಯನಾಗಿ ದೀಕ್ಷೆ ಪಡೆಯುವ ಮೂಲಕ ಸಂತರಾಗಿದ್ದು ಈಗ ಇತಿಹಾಸ. ತಮ್ಮ ತತ್ವಪದಗಳಲ್ಲಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಶರೀಫರು ಶಿವಯೋಗಿಗಳಾದರು. ತಮ್ಮ ಸಮಕಾಲೀನರಾದ ನವಲಗುಂದದ ನಾಗಲಿಂಗಸ್ವಾಮಿ, ಸಿದ್ದಾರೂಢರು ಸೇರಿದಂತೆ ಹಲವು ಸಂತರ ಜೊತೆ ಸೇರಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಶರೀಫರು ಗುರುತಿಸಿಕೊಂಡರು.
ವಿಶೇಷವಾಗಿ ಹಿಂದೂ ಮುಸ್ಲಿಂ ಸಾಮರಸ್ಯದ ಪ್ರತೀಕವಾದ ಶರೀಫರು, ಸಾಂಸಾರಿಕ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿ ತಮ್ಮ ಜೀವನವನ್ನ ಸಮಾಜಕ್ಕೆ ಮೀಸಲಾಗಿಟ್ಟವರು. ಶಿಶುನಾಳಾಧೀಶನ ಅಂಕಿತ ತತ್ವಪದಗಳು ಶರೀಫರನ್ನು ಇಂದಿಗೂ ಜೀವಂತವಾಗಿರಿಸಿವೆ. ಅವರು 1889 ರಲ್ಲಿ ವಿಧಿವಶರಾದಾಗ ಹಿಂದೂ-ಮುಸ್ಲಿಂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶಿಶುನಾಳ ಶರೀಫರ ಗದ್ದುಗೆ ಇಂದಿಗೂ ಸಹ ಹಿಂದೂ-ಮುಸ್ಲಿಂ ಭಾವೈಕ್ಯತೆಯ ತಾಣವಾಗಿದೆ.