ಹಾವೇರಿ: ಪಿಎಸ್ಐ ನೇಮಕಾತಿ ಆದೇಶ ಕೈ ಸೇರುವ ಮುನ್ನವೇ ಯುವಕನೋರ್ವ ಪಿಎಸ್ಐ ಬಟ್ಟೆ ತೊಟ್ಟು ವೇದಿಕೆಯೇರಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದ ನಿವಾಸಿ ಬಸನಗೌಡ ಕರೇಗೌಡ್ರ ಈ ರೀತಿ ವೇದಿಕೆಯೇರಿದ ವ್ಯಕ್ತಿ.
ಜನವರಿ 19, 2022ರಂದು ಬಿಡುಗಡೆಯಾಗಿದ್ದ ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಬಸನಗೌಡ 27ನೇ ರ್ಯಾಂಕ್ ಗಳಿಸಿದ್ದರು. 545 ಪಿಎಸ್ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿಯಲ್ಲಿ ಬಸನಗೌಡ ಆಯ್ಕೆ ಆಗಿದ್ದರು. ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಬಸನಗೌಡ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಿಎಸ್ಐ ಸೆಲೆಕ್ಷನ್ ಆಗಿದ್ದಕ್ಕೆ ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಎಸ್ಐ ಡ್ರೆಸ್ ಹಾಕಿಕೊಂಡು ಬಸನಗೌಡ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಷಣವನ್ನೂ ಮಾಡಿದ್ದಾರೆ. ವಿಚಿತ್ರ ಅಂದರೆ, ಏಪ್ರಿಲ್ 20, 2022ರಂದು ತನಿಖೆಗೆ ಹಾಜರಾಗುವಂತೆ ಸಿಐಡಿ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ಐವತ್ತು ಜನರಿಗೆ ನೀಡಿದ್ದ ನೋಟಿಸ್ ಪಟ್ಟಿಯಲ್ಲಿ ಬಸನಗೌಡ ಕರೇಗೌಡ್ರ ಹೆಸರೂ ಸಹ ಇದೆ. ಬಸನಗೌಡ ಅಕ್ಟೋಬರ್ 3, 2021ರಂದು ನಡೆದಿದ್ದ ಪಿಎಸ್ಐ ನೇಮಕಾತಿ ಪರೀಕ್ಷೆ ಬರೆದಿದ್ದರು.
ಇದನ್ನೂ ಓದಿ: 'ಪಿಎಸ್ಐ ಅಕ್ರಮದ ಆಡಿಯೋ ಸಾಕ್ಷ್ಯ ಇಷ್ಟು ದಿನ ಯಾಕೆ ಬಿಡುಗಡೆ ಮಾಡಲಿಲ್ಲ?'