ಹಾವೇರಿ : ಆರೋಗ್ಯ ಸರಿ ಇಲ್ಲದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರುವ ವೇಳೆ ಮಾರ್ಗ ಸರಿ ಇರದೇ ತಡವಾದ ಕಾರಣ ಮಗು ಮೃತಪಟ್ಟಿದೆ. ಇದರಿಂದ ಬೇಸತ್ತು ಪೋಷಕರು ಆಕ್ರೋಶ ಹೊರಹಾಕಿ ಮುಖ್ಯಮಂತ್ರಿ ಅವರ ಭೇಟಿಗಾಗಿ ಮನವಿ ಮಾಡಿದ ಘಟನೆ ಜರುಗಿತು. ಮೊನ್ನೆ ಜಿಲ್ಲಾಸ್ಪತ್ರೆಯಲ್ಲಿ ಮಗು ಜನಿಸಿದ್ದು, ಮಗುವಿನ ಆರೋಗ್ಯದ ಬಗ್ಗೆ ಯಾವುದೇ ಸ್ಪಷ್ಟತೆ ನೀಡದೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಲ್ಲೆಯ ಹಾನಗಲ್ ತಾಲೂಕಿನ ಹಿರೇಬಾಸೂರು ಗ್ರಾಮದ ಬಸವರಾಜ ಮತ್ತು ಪೂರ್ಣಿಮಾ ದಂಪತಿಯ ಮಗು ಮೊನ್ನೆ ಜಿಲ್ಲಾಸ್ಪತ್ರೆಯಲ್ಲಿ ಜನಿಸಿತ್ತು. ಇಂದು ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಗುವನ್ನು ಆಸ್ಪತ್ರೆಗೆ ಕೆರೆದೊಯ್ಯುವ ವೇಳೆ ಮಾರ್ಗ ಸರಿಯಿರದ ಕಾರಣ ಮಾರ್ಗಮಧ್ಯೆಯೇ ಮೃತಪಟ್ಟಿದೆ. ಈ ಸಂಬಂಧ ಮುಖ್ಯಮಂತ್ರಿ ಅವರ ಬಳಿ ಮಾತನಾಡಬೇಕು ಎಂದು ಮಗುವಿನ ಕಡೆಯವರು ನಗರದ ಪ್ರವಾಸಿ ಮಂದಿರದ ಬಳಿ ಕಾದು ಕುಳಿತಿದ್ದರು.
ಮಗುವಿನ ಸಾವಿಗೆ ಜಿಲ್ಲಾಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ಮತ್ತು ರಸ್ತೆ ದುರವಸ್ಥೆಯೇ ಕಾರಣ. ಈ ಮಗುವಿಗೆ ಬಂದ ಪರಿಸ್ಥಿತಿ ಬೇರಾರಿಗೂ ಆಗಬಾರದು ಎಂದು ಅಳಲು ತೋಡಿಕೊಂಡರು. ಮಗುವಿನ ಆರೋಗ್ಯದ ಬಗ್ಗೆ ಸ್ಪಷ್ಟತೆ ನೀಡದ ಆಸ್ಪತ್ರೆ ಅಧಿಕಾರಿಗಳ ಮೇಲೆ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಶಾಸಕಾಂಗಕ್ಕಿಂತ ನ್ಯಾಯಾಂಗ ಶ್ರೇಷ್ಠ: ಮತ್ತೊಮ್ಮೆ ಸರಳತೆ ಮೆರೆದ ಸಿಎಂ ಬೊಮ್ಮಾಯಿ