ಹಾವೇರಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ. ಈ ಬಗ್ಗೆ ಎಲ್ಲಿಯೂ ಚರ್ಚೆಗಳು ನಡೆದಿಲ್ಲ, ಯಾರೂ ಅದನ್ನು ಹೇಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ವರ್ಷಗಳ ಕಾಲ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಸೂಕ್ತ ಕಾಲಘಟ್ಟದಲ್ಲಿ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ಇದೇ ವೇಳೆ ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ, ರೈತಪರವಾದ ಮಸೂದೆಗಳ ವಿರುದ್ಧ ಕಾಂಗ್ರೆಸ್ ರೈತರನ್ನ ಎತ್ತಿಕಟ್ಟುವ ಮೂಲಕ ಕಾಂಗ್ರೆಸ್ ಹೀನ ರಾಜಕಾರಣ ಮಾಡ್ತಿದೆ ಎಂದರು.
ಕಾಯ್ದೆ ಜಾರಿ ಬಗ್ಗೆ ಕಾಂಗ್ರೆಸ್ ಲೋಕಸಭಾ ಚುನಾವಣೆ ವೇಳೆ ಹೇಳಿತ್ತು. ಈಗ ಬಿಜೆಪಿಗೆ ಲಾಭ ಆಗುತ್ತೆ ಅಂತಾ ರೈತರನ್ನ ದಾರಿ ತಪ್ಪಿಸೋ ಕೆಲಸ ಮಾಡ್ತಿದೆ. ಕಾಂಗ್ರೆಸ್ ದಲ್ಲಾಳಿಗಳ ಪರವಾಗಿ ಬ್ಯಾಟಿಂಗ್ ಮಾಡ್ತಿದೆ. ಕಾಂಗ್ರೆಸ್ ನಿನ್ನೆ ರೈತ ವಿರೋಧಿ ನಿರ್ಧಾರ ತೆಗೆದುಕೊಂಡಿದೆ. ನಿನ್ನೆಯ ಹೋರಾಟದ ಮೂಲಕ ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರದಿದ್ದಾಗ ಬೆಂಕಿ ಹಚ್ಚೋ ಕೆಲಸ ಮಾಡುತ್ತೆ. ಹಿಂದೆಯೂ ಮಾಡಿದೆ, ಈಗಲೂ ಅದನ್ನೇ ಮಾಡ್ತಿದೆ ಎಂದು ಕಟೀಲ್ ಕಿಡಿಕಾರಿದರು.
ಸುರೇಶ್ ಅಂಗಡಿಯವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುರೇಶ್ ಅಂಗಡಿ ನನಗೆ ಬಹಳ ಆತ್ಮೀಯರು. ಅವರು ಎಂದು ಹಾಗೇ ಹೇಳಿರಲಿಲ್ಲ ಎಂದು ಹೇಳಿದರು.