ಹಾವೇರಿ : ಹಣ ಎಂಥವರನ್ನಾದ್ರೂ ಹೇಗ್ಹೇಗೋ ಮಾಡುತ್ತೆ ಅನ್ನೋದಕ್ಕೆ ಶಿಗ್ಗಾವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ. ಇದೇ ಊರಿನ ಜಮೀನಲ್ ಅಹ್ಮದ್ ಪಟೇಲ್ ಮತ್ತು ಶಿಗ್ಗಾವಿಯ ನಿಮ್ತಿಯಾಜ್ ಅಹ್ಮದ್ ಇಬ್ಬರು ಕೂಡ ಕುಚಿಕು ಗೆಳೆಯರು.
ಒಣ ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದ ಜಮೀನಲ್ ಅಹ್ಮದ್ ಎಲ್ಲ ಗುಟ್ಟುಗಳನ್ನು ನಿಮ್ತಿಯಾಜ್‌ಗೆ ಹೇಳುತ್ತಿದ್ದ. ಅಲ್ಲದೆ ಹುಬ್ಬಳ್ಳಿಗೆ ಹೋಗಬೇಕಾದರೆ ತನ್ನ ದ್ವಿಚಕ್ರ ವಾಹನವನ್ನ ಇಮ್ತಿಯಾಜ್‌ನ ಮನೆಯಲ್ಲಿಟ್ಟು ಹೋಗುತ್ತಿದ್ದ. ಇದೇ ರೀತಿ ಹುಬ್ಬಳ್ಳಿಗೆ ಮೆಣಸಿನಕಾಯಿ ಮಾರಲು ಹೋಗಿದ್ದ ಜಮೀನಲ್ 7.50 ಲಕ್ಷ ರೂ. ನಗದು ತೆಗೆದುಕೊಂಡು ಬಂಕಾಪುರಕ್ಕೆ ಮರಳುತ್ತಿದ್ದ ವೇಳೆ ಅನಾಹುತವೊಂದು ನಡೆದಿತ್ತು.
ಆತನ ತಲೆಗೆ ಹೊಡೆದು 7.50 ಲಕ್ಷ ರೂಪಾಯಿ ಹಣ ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಕುರಿತಂತೆ ಜಮೀನಲ್ ಅಹ್ಮದ್ ಪಟೇಲ್ ಬಂಕಾಪುರದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದ. ಘಟನೆ ಸಂಬಂಧ ಪೊಲೀಸರು ಏಳು ಜನ ಆರೋಪಿಗಳನ್ನ ಬಂದಿಸಿದ್ದಾರೆ. ಪ್ರಕರಣ ಬೇಧಿಸುತ್ತಿದ್ದಂತೆ ಬಂಕಾಪುರ ಪೊಲೀಸರಿಗೆ ಮತ್ತು ಜಮೀನಲ್ ಗೆ ಆಶ್ಚರ್ಯ ಕಾದಿತ್ತು. ಯಾಕಂದ್ರೆ, ಈ ಪ್ರಕರಣದ ಪ್ರಮುಖ ರೂವಾರಿ ಜಮೀಲನ್ ಪ್ರಾಣ ಸ್ನೇಹಿತ ನಿಮ್ತಿಯಾಜ್.
ಗೆಳೆಯನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ನಿಮ್ತಿಯಾಜ್ ಆರು ಜನರ ಗುಂಪು ರಚಿಸಿ ಗೆಳೆಯನ ಹಣ ಕದಿಯುವ ಪ್ಲಾನ್ ರೂಪಿಸಿದ್ದ. ಬಂಕಾಪುರ ಪೊಲೀಸರು ನಿಮ್ತಿಯಾಜ್ ಸೇರಿದಂತೆ ಏಳು ಜನ ಆರೋಪಿಗಳನ್ನ ಬಂಧಿಸಿ ಇದೀಗ ಜೈಲಿಗಟ್ಟಿದ್ದಾರೆ.