ಹಾವೇರಿ : ಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ವಿರುದ್ಧ ದಬ್ಬಾಳಿಕೆ ಆರೋಪ ಕೇಳಿ ಬಂದಿದೆ. ವಿರೂಪಾಕ್ಷಪ್ಪ ಸ್ವಗ್ರಾಮ ಮೋಟೆಬೆನ್ನೂರಿನಲ್ಲಿರುವ ತಮ್ಮ ಜಮೀನಿಗೆ ರೈತರೊಬ್ಬರ ಜಮೀನಿನಲ್ಲಿ ರಸ್ತೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಅಷ್ಟೇ ಅಲ್ಲದೆ, ಈ ಬಗ್ಗೆ ಪ್ರಶ್ನಿಸಿದ ರೈತನ ಮಗ ಹೆಡ್ಕಾನ್ಸ್ಟೇಬಲ್ ಅನ್ನು ಅಮಾನತು ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ, ಈ ಎಲ್ಲಾ ಆರೋಪಗಳನ್ನು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನಿರಾಕರಿಸಿದ್ದಾರೆ. ನಾನು ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ, ನಾನು ಆ ರೀತಿ ಮಾಡಿಲ್ಲ. ಓರ್ವ ಹೆಡ್ ಕಾನ್ಸ್ಟೇಬಲ್ ಆಗಿ ಅವರಿಗೆ ಸೌಜನ್ಯಯುತವಾಗಿ ಮಾತನಾಡಲು ಗೊತ್ತಿರಲಿಲ್ಲ. ಹಾಗಾಗಿ, ಇಲಾಖೆಯೇ ಅವರ ವಿರುದ್ಧ ಕ್ರಮ ಕೈಗೊಂಡಿದೆ ಎಂದು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಘಟನೆ?
ಬ್ಯಾಡಗಿ ತಾಲೂಕು ಮೋಟೆಬೆನ್ನೂರಲ್ಲಿ ತಮ್ಮ ಜಮೀನಿಗೆ ಪಕ್ಕದ ರೈತನ ಜಮೀನಿನ ಮೂಲಕ ರಸ್ತೆ ಮಾಡಿದ್ದಾರೆ ಎಂಬ ಆರೋಪ ಶಾಸಕ ವಿರೂಪಾಕ್ಷಪ್ಪ ಮೇಲಿದೆ. ಮೋಟೆಬೆನ್ನೂರಿನ ನಿವಾಸಿ ಗಣೇಶಪ್ಪ ಮತ್ತಿಹಳ್ಳಿ ಶಾಸಕರ ವಿರುದ್ಧ ದಬ್ಬಾಳಿಕೆ ಆರೋಪ ಮಾಡಿದ್ದಾರೆ. ನಮ್ಮ ಜಮೀನಿನ ಪಕ್ಕದಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಜಮೀನು ಖರೀದಿ ಮಾಡಿದ್ದಾರೆ. ಆ ಜಮೀನಲ್ಲಿ ಇತ್ತೀಚೆಗೆ ಅಡಿಕೆ ಗಿಡ ನೆಟ್ಟಿದ್ದಾರೆ.
ಶಾಸಕರ ಜಮೀನಿಗೆ ತೆರಳಲು ಬೇರೆ ಕಡೆ ರಸ್ತೆಯಿದೆ. ನಮ್ಮ ಜಮೀನಿನ ಸರ್ವೆ ನಂಬರ್ 285 ರಲ್ಲಿ ಯಾವುದೇ ಸಾರ್ವಜನಿಕ ರಸ್ತೆ ಹಾದು ಹೋಗಿಲ್ಲ. ಆದರೂ, ಶಾಸಕರು ದಬ್ಬಾಳಿಕೆ ಮಾಡಿ, ನಮ್ಮ ಜಮೀನಿನ ಮೂಲಕ ಅವರ ಜಮೀನಿಗೆ ರಸ್ತೆ ನಿರ್ಮಿಸಿದ್ದಾರೆ ಎಂದು ಗಣೇಶಪ್ಪ ದೂರಿದ್ದಾರೆ.
ರೈತ ಗಣೇಶಪ್ಪ ಅವರು ಶಾಸಕರು ತಮ್ಮ ಜಮೀನಿನಲ್ಲಿ ನಿರ್ಮಿಸಿದ್ದ ರಸ್ತೆಗೆ ಮುಳ್ಳಿನ ಬೇಲಿ ನಿರ್ಮಿಸಿದ್ದರು. ಈ ಬಗ್ಗೆ ಅರಿತ ಶಾಸಕ ವಿರೂಪಾಕ್ಷಪ್ಪ ಸ್ಥಳಕ್ಕೆ ಬಂದು ಗಣೇಶಪ್ಪ ಅವರು ಮಗ ನೀಲಪ್ಪ ಅವರ ಜೊತೆ ವಾಗ್ವಾದ ನಡೆಸಿದ್ದರು. ನೀಲಪ್ಪ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದಾರೆ.
ಓದಿ : ವಾಟ್ಸಪ್ ಗ್ರೂಪ್‌ಗೆ ಬೇಳೂರು ಗೋಪಾಲಕೃಷ್ಣರಿಂದ ಅಶ್ಲೀಲ ಫೋಟೋ ರವಾನೆ ಆರೋಪ: ಖಂಡನೆ
ನೀಲಪ್ಪ ಜೊತೆ ವಾಗ್ವಾದ ನಡೆಸಿದ ಶಾಸಕ, ನಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನೀಲಪ್ಪ ಅವರನ್ನು ಪೊಲೀಸ್ ಹುದ್ದೆಯಿಂದ ಅಮಾನತು ಮಾಡಿಸಿದ್ದಾರೆ ಎಂದು ಸ್ವತಃ ನೀಲಪ್ಪ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಆದರೆ, ಶಾಸಕರು ಈ ಆರೋಪವನ್ನು ನಿರಾಕರಿಸಿದ್ದು, ನಾನು ಅಮಾನತು ಮಾಡಿಸಿಲ್ಲ. ಅವರು ನನ್ನ ಜೊತೆ ಸೌಜನ್ಯಯುತವಾಗಿ ಮಾತನಾಡದ ಕಾರಣ, ಇಲಾಖೆಯೇ ಅವರನ್ನು ಅಮಾನತು ಮಾಡಿದೆ ಎಂದಿದ್ದಾರೆ.
ಒಟ್ಟಿನಲ್ಲಿ, ಶಾಸಕರು ನಮ್ಮ ಜಮೀನಿನಲ್ಲಿ ರಸ್ತೆ ನಿರ್ಮಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ರೈತ ಗಣೇಶಪ್ಪ ಆರೋಪ ಮಾಡಿದರೆ, ನಾನು ಹೊಸದಾಗಿ ರಸ್ತೆ ನಿರ್ಮಿಸಿಲ್ಲ. ಈ ಹಿಂದೆಯೇ ಇದ್ದ ರಸ್ತೆಯನ್ನು ಬಳಿಸಿಕೊಂಡಿದ್ದೇನೆ ಅಷ್ಟೇ ಎಂದು ಶಾಸಕ ಹೇಳಿದ್ದಾರೆ. ಈ ನಡುವೆ ದೂರುದಾರ ರೈತನ ಮಗ ಹೆಡ್ ಕಾನ್ಸ್ಟೇಬಲ್ ನೀಲಪ್ಪ, ತಮ್ಮ ಅಮಾನತು ರದ್ದುಗೊಳಿಸಿ ಕೆಲಸ ಮಾಡಲು ಅವಕಾಶ ನೀಡುವಂತೆ ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದಾರೆ.
ನಿಮ್ಮ ಮೇಲಿನ ಆರೋಪಗಳು ಮುಕ್ತವಾದ ಬಳಿಕವಷ್ಟೇ ಅಮಾನತು ಆದೇಶ ವಾಪಸ್ ಪಡೆಯುವುದಾಗಿ ಹಿರಿಯ ಅಧಿಕಾರಿಗಳು ನೀಲಪ್ಪ ಅವರಿಗೆ ಹೇಳಿದ್ದಾರಂತೆ. ಹಾಗಾಗಿ, ಸಮಸ್ಯೆ ಇತ್ಯರ್ಥವಾಗಬೇಕಾದರೆ, ಅಲ್ಲಿ ನಿಜವಾಗಿಯೂ ರಸ್ತೆ ಇತ್ತಾ, ಇಲ್ಲಾ ಹೊಸದಾಗಿ ನಿರ್ಮಿಸಲಾಗಿದೆಯಾ..? ಎಂಬುದನ್ನು ಸಂಬಂಧಪಟ್ಟ ಇಲಾಖೆಯವರು ತಿಳಿಸಬೇಕಾಗಿದೆ.