ಹಾವೇರಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ ಆರೋಪಿಯನ್ನು ಬಂಧಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಏ.19 ರಂದು ನಡೆದಿದ್ದ ಶೂಟೌಟ್ ಪ್ರಕರಣದ ಆರೋಪಿ ಮಂಜುನಾಥ್ ಅಲಿಯಾಸ್ ಮಲ್ಲಿಕ್ ಪಾಟೀಲನನ್ನು ಕಾರವಾರ ಜಿಲ್ಲೆಯ ಮುಂಡಗೋಡದಲ್ಲಿ ಬಂಧಿಸಲಾಗಿದೆ. ಆರೋಪಿಯಿಂದ ಶೂಟೌಟ್‌ಗೆ ಬಳಿಸಲಾಗಿದ್ದ ಗನ್, 15 ಜೀವಂತ ಗುಂಡು, 2 ಖಾಲಿ ಕೋಕಾ ಮತ್ತು ಒಂದು ಸ್ಕೂಟಿ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಪ್ರಕರಣ ಏನು?: ಆರೋಪಿ ಮಂಜುನಾಥ್ ಏ.19 ರಂದು ಶಿಗ್ಗಾವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಕೆಜಿಎಫ್ ಚಾಪ್ಟರ್ -2 ಸಿನಿಮಾ ವೀಕ್ಷಣೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಮುಗಳಿ ಗ್ರಾಮದ ವಸಂತಕುಮಾರ್ ಜೊತೆ ಯಾವುದೋ ಕಾರಣಕ್ಕೆ ಜಗಳವಾಗಿದೆ. ನಂತರ ಚಿತ್ರಮಂದಿರದಿಂದ ಹೊರಗೆ ಬಂದ ಬಳಿಕ ಆರೋಪಿ ಮಂಜುನಾಥ್, ವಸಂತಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿದ್ದ. 4 ಗುಂಡುಗಳು ವಸಂತಕುಮಾರ್ ದೇಹ ಹೊಕ್ಕಿದ್ದವು. ಕಿಮ್ಸ್ ಆಸ್ಪತ್ರೆ ದಾಖಲಾಗಿ, ಈಗೆಗಷ್ಟೇ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದಾನೆ.
ಮಹಾರಾಷ್ಟ್ರದಲ್ಲಿ ಸುತ್ತಾಡಿ ಬೆಂಗಳೂರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ: ಗುಂಡಿನ ದಾಳಿ ಮಾಡಿದ್ದ ಆರೋಪಿ ಮಂಜುನಾಥ್ ನಾಪತ್ತೆಯಾಗಿದ್ದ. 1 ತಿಂಗಳು ಕಳೆದರು ಪತ್ತೆಯಾಗಿರಲಿಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದರಿಂದ ಪೊಲೀಸ್ ಇಲಾಖೆಗೆ ಆರೋಪಿ ಬಂಧಿಸುವುದು ಮಹತ್ವದ್ದಾಗಿತ್ತು. ಆರೋಪಿ ಮಂಜುನಾಥ್ ಘಟನೆ ಬಳಿಕ ಮಹಾರಾಷ್ಟ್ರದ ವಿವಿಧ ಪಟ್ಟಣಗಳಲ್ಲಿ ಅಲೆದಾಡಿದ್ದ. ಗೋವಾ ಬೆಂಗಳೂರಿನಲ್ಲೂ ತಲೆಮರೆಸಿಕೊಂಡಿದ್ದ.
ಆರೋಪಿ ಸುಳಿವು ಬಿಟ್ಟುಕೊಡದೇ ಮೊಬೈಲ್ ಸಹ ಬಳಸದೇ ಇರುವುದು ಬಂಧನದ ವಿಳಂಬಕ್ಕೆ ಕಾರಣವಾಗಿತ್ತು. ಕೊನೆಗೆ ಆರೋಪಿಯ ಭಾವಚಿತ್ರ ಪ್ರಕಟಿಸಿದ ಪೊಲೀಸ್ ಇಲಾಖೆ, ಗುರುತು ಪತ್ತೆಗೆ ಸಾರ್ವಜನಿಕರಿಗೆ ಮನವಿ ಮಾಡಿತ್ತು. ಆರೋಪಿ ಮಂಜುನಾಥನ್ ಕಾರವಾರದ ಮುಂಡಗೋಡದಲ್ಲಿ ಇರುವುದು ಗೊತ್ತಾಗಿ ದಾಳಿ ನಡೆಸಿದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗೆ ಹಣದ ನೆರವು ಮತ್ತು ಆಶ್ರಯ ನೀಡಿದ ಆರೋಪದ ಮೇಲೆ ಇಸ್ಮಾಯಿಲ್ ಎಂಬುವನನ್ನೂ ಬಂಧಿಸಲಾಗಿದೆ. ಆರೋಪಿ ಬಂಧಿಸಿದ ಸಿಬ್ಬಂದಿಗೆ ಎಸ್ಪಿ ಹನುಮಂತರಾಯ ಅಭಿನಂದನೆ ಸಲ್ಲಿಸಿದ್ದಾರೆ.
ಓದಿ: ದಲಿತ ಯುವಕನ ಮದುವೆ ಮೆರವಣಿಗೆ ವೇಳೆ ಕಲ್ಲು ತೂರಾಟ: ಆರೋಪಿಗಳ ಮನೆ ಕೆಡವಿದ 'ಬುಲ್ಡೋಜರ್'