ಹಾವೇರಿ: ಜಿಲ್ಲೆಯ ಹಾನಗಲ್ ಪೊಲೀಸರು ಭರ್ಜರಿ ಬೇಟೆಯಾಡಿದ್ದು ಗೋಲ್ಡ್ ಕಾಯಿನ್ ನೀಡುವುದಾಗಿ ನಂಬಿಸಿ 10 ಲಕ್ಷ ರೂಪಾಯಿ ವಂಚಿಸಿದ್ದ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಆರೋಪಿಗಳನ್ನ ಶಿವಮೊಗ್ಗ ಜಿಲ್ಲೆಯ ಕೃಷ್ಣಪ್ಪ ಕಡೇಮನಿ, ಸಣ್ಣನಿಂಗಪ್ಪ ಕೊರಚರ, ಶಿವಪ್ಪ ಭೋವಿ, ರೇಣುಕಮ್ಮ ಕೊರಚರ ಎಂದು ಗುರುತಿಸಲಾಗಿದೆ. ಆರೋಪಿಗಳು ಬಂಗಾರದ ನಾಣ್ಯ ನೀಡುವುದಾಗಿ ನಂಬಿಸಿ ಕೇರಳ ಮೂಲದ ಸುನೀಲ್ ಮ್ಯಾಥ್ಯೂ ಎಂಬುವವರಿಗೆ ವಂಚಿಸಿದ್ದರು.
ಒಂದು ಬಂಗಾರದ ನಾಣ್ಯ ತೋರಿಸಿ ಆರೋಪಿಗಳು ಮ್ಯಾಥ್ಯೂನಿಂದ ಮೊಬೈಲ್ ನಂಬರ್ ಪಡೆದಿದ್ದರು. 10 ಲಕ್ಷ ರೂಪಾಯಿ ತೆಗೆದುಕೊಂಡು ಬಂದರೆ ಬಂಗಾರದ ಹಣ ನೀಡುವುದಾಗಿ ತಿಳಿಸಿದ್ದರು. ಈ ಕುರಿತಂತೆ ಹಾನಗಲ್ ಬಳಿಯ ನಾಲ್ಕರ ಕ್ರಾಸ್ ಬಳಿ ಹಣ ತರಲು ಆರೋಪಿಗಳ ತಂಡ ಮ್ಯಾಥ್ಯೂನಿಗೆ ತಿಳಿಸಿತ್ತು. ಹಣದ ಸಮೇತ ಮ್ಯಾಥ್ಯೂ ಒಬ್ಬರೇ ಬಂದಾಗ 10 ಲಕ್ಷ ರೂಪಾಯಿ ಕಿತ್ತುಕೊಂಡು ತಂಡ ಪರಾರಿಯಾಗಿತ್ತು.
ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಹಾನಗಲ್ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ನಾಲ್ಕು ಜನ ಆರೋಪಿಗಳನ್ನು ಹಾನಗಲ್ ಪೊಲೀಸ್ ಠಾಣೆ ಸಿಪಿಐ ಶಿವಶಂಕರ್ ಗಣಾಚಾರಿ ನೇತೃತ್ವದ ತಂಡ ಬಂಧಿಸಿದೆ. ಆರೋಪಿಗಳಿಂದ 10 ಲಕ್ಷ ರೂಪಾಯಿ ಮತ್ತು ಎರಡು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಆನೇಕಲ್ ಪೊಲೀಸರ ಭರ್ಜರಿ ಬೇಟೆ.. ಮಾರಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್