ಹಾವೇರಿ: ಎರಡು ಹೆಣ್ಣು ಕೃಷ್ಣಮೃಗಗಳನ್ನು ಬೇಟೆಯಾಡಿ ಅವುಗಳ ಮೃತದೇಹ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಐವರು ಆರೋಪಿಗಳನ್ನು ರಟ್ಟೀಹಳ್ಳಿ ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃಷ್ಣಮೃಗಗಳ ಬೇಟೆಯಾಡಲು ಬಳಸಿದ್ದ ಒಂದು ಸಿಂಗಲ್ ಬ್ಯಾರಲ್ ಬಂದೂಕು, ಆರು ಕೋಕಾಗಳು, ಎರಡು ಚಾಕು ಮತ್ತು ಒಂದು ಬೊಲೆರೋ ವಾಹನ ಸೇರಿದಂತೆ ವಿವಿಧ ವಸ್ತುಗಳನ್ನ ಜಪ್ತಿ ಮಾಡಲಾಗಿದೆ.
ಆರೋಪಿಗಳನ್ನು ಸಾದಿಕ್ ನವೀದ್ (45), ಮಹ್ಮದ ಅಲಿ (32), ಸಯ್ಯದ ಮುಕೀಬ್ (21), ಸಯ್ಯದ ನಸರುಲ್ಲಾ (52) ಮತ್ತು ಸುಹೇಲ್ ಖಾನ್ (21) ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಗ್ರಾಮದವರು ಎಂದು ತಿಳಿದುಬಂದಿದೆ.
ಆರೋಪಿಗಳು ಅರಣ್ಯ ಪ್ರದೇಶಗಳಲ್ಲಿ ಬಂದೂಕಿನಿಂದ ಗುಂಡು ಹೊಡೆದು ಕೃಷ್ಣಮೃಗಗಳನ್ನು ಬೇಟೆಯಾಡಿ ಕೃಷ್ಣಮೃಗಗಳ ಮಾಂಸ ಮತ್ತು ಚರ್ಮ ಮಾರಾಟ ಮಾಡುತ್ತಿದ್ದರು. ಕೃಷ್ಣಮೃಗಗಳನ್ನು ಬೇಟೆಯಾಡುವುದಲ್ಲದೆ ಬಂದೂಕು, ಚಾಕು ಇಟ್ಟುಕೊಂಡು ಜನರನ್ನು ದರೋಡೆ ಸಹ ಮಾಡುತ್ತಿದ್ದರು. ರಟ್ಟೀಹಳ್ಳಿ ಪಿಎಸ್ಐ ಕೃಷ್ಣಪ್ಪ ತೋಪಿನ ಹಾಗೂ ತಂಡ ಆರೋಪಿಗಳನ್ನು ಬಂಧಿಸಿದೆ. ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಾವೇರಿ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೇಯಸಿಯ ನಗ್ನಚಿತ್ರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಬೆದರಿಕೆ, ವ್ಯಕ್ತಿ ಬಂಧನ