ಹಾವೇರಿ: ತಮ್ಮ ಜೀವದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್‌ಗೆ ಆರೋಗ್ಯ ಭಾರತಿ ಸಂಸ್ಥೆ ಉಚಿತ ಊಟ, ಉಪಹಾರದ ವ್ಯವಸ್ಥೆ ಮಾಡುತ್ತಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ಲಾಕ್ಡೌನ್ ಘೋಷಿಸಿದೆ. ಹೀಗಾಗಿ ಜಿಲ್ಲೆಯ ಹೋಟೆಲ್‌ಗಳು ಬಂದ್ ಆಗಿವೆ. ಇದರಿಂದಾಗಿ ಕೊರೊನಾ ವಾರಿಯರ್ಸ್‌ಗೆ ಊಟ ಹಾಗೂ ನೀರಿನ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಗಮನಿಸಿದ ಹಾವೇರಿಯ ಆರೋಗ್ಯ ಭಾರತಿ ಸಂಸ್ಥೆ, ನಿತ್ಯ 200ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್‌ಗೆ ಉಚಿತ ಊಟ ಸರಬರಾಜು ಮಾಡುತ್ತಿದೆ.
ಚಿತ್ರಾನ್ನ, ಪುಳಿಯೋಗರೆ, ಪಲಾವ್, ಘೀ ರೈಸ್, ಜೀರಾ ರೈಸ್ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ಸ್ವತಃ ತಯಾರಿಸಿ ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವವರಿಗೆ, ಕೊರೊನಾ ವಾರಿಯರ್ಸ್‌ಗೆ ವಿತರಿಸುತ್ತಿದ್ದಾರೆ. ಸಂಸ್ಥೆಯ 20 ಸದಸ್ಯರ ತಂಡ ಈ ಕಾರ್ಯನಿರ್ವಹಿಸುತ್ತಿದೆ.
ಆರೋಗ್ಯ ಭಾರತಿ ಸಂಸ್ಥೆ ಆರಂಭದಲ್ಲಿ ಕೊರೊನಾ ವಾರಿಯರ್ಸ್‌ಗೆ ಮಾಸ್ಕ್, ಸ್ಯಾನಿಟೈಸರ್, ಕಷಾಯ ಪುಡಿ ವಿತರಿಸುತ್ತಿತ್ತು. ಆದರೆ, ಇದೀಗ ಕೊರೊನಾ ವಾರಿಯರ್ಸ್‌ಗೆ ಊಟದ ಸಮಸ್ಯೆಯಾಗುತ್ತಿರುವುದನ್ನು ಅರಿತ ಈ ಸಂಸ್ಥೆ, ಊಟದ ವ್ಯವಸ್ಥೆ ಮಾಡುತ್ತಿದೆ.
ಓದಿ: ಕೊರೊನಾ ಸಂಖ್ಯೆ ಇಳಿಕೆಯತ್ತ ಕಾಲಿಟ್ಟ ಬೆಂಗಳೂರು... 600 ಸೋಂಕಿತರು ಕಣ್ಮರೆ!