ರಾಣೇಬೆನ್ನೂರು: ಇಲ್ಲಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ 20 ದಿನಗಳಲ್ಲಿ ತಾಲೂಕಿನಲ್ಲಿ ಐವರು ರೈತರು ಆತ್ಮಹತ್ಯೆ ಮಾಡಿಕೊಂಡಂತಾಗಿದೆ.
ತುಮ್ಮಿನಕಟ್ಟಿ ಗ್ರಾಮದ ರೈತ ಮಂಜಪ್ಪ ಜಾಧವ (35) ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಬ್ಯಾಂಕ್ ಸೇರಿದಂತೆ ಇತರೆ ಕಡೆ ಸುಮಾರು ಎರಡು ಲಕ್ಷ ರೂ. ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಲ್ಲದ ರೈತ ಆತ್ಮಹತ್ಯೆ:
ತಾಲೂಕಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ರೈತರು ಅಲ್ಪ ಮಳೆಯಾಗಿದ್ದರೂ ಬಿತ್ತನೆ ಮಾಡಿದ್ದರು. ನಂತರ ಕಳೆದ ಒಂದು ತಿಂಗಳಿಂದ ಬಿಟ್ಟು ಬಿಡದೇ ಸುರಿದ ಮಳೆಯಿಂದ ಬೆಳೆ ನಾಶವಾಗಿವೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಕಳೆದ 20 ದಿನಗಳಲ್ಲಿ ತಾಲೂಕಿನ ಐರಣಿ, ಹೆಡಿಯಾಲ, ಚೌಡಯ್ಯನದಾನಪುರ, ತುಮ್ಮಿನಕಟ್ಟಿ ಗ್ರಾಮದಲ್ಲಿ ತಲಾ ಒಬ್ಬ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.