ಹಾವೇರಿ: ಅಂಗನವಾಡಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ವಿತರಿಸಬೇಕಾದ ಆಹಾರ ಪದಾರ್ಥಗಳನ್ನ ಕದ್ದು ಸಾಗಿಸ್ತಿದ್ದಾಗ ಅಂಗನವಾಡಿ ಶಿಕ್ಷಕಿ ಮತ್ತು ಅಡುಗೆ ಸಹಾಯಕಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಬಸವನಗುಡಿ ನಗರದಲ್ಲಿ ನಡೆದಿದೆ.
ಅಂಗನವಾಡಿಯಲ್ಲಿದ್ದ ಎಣ್ಣೆ, ತೊಗರಿ ಬೇಳೆ, ಹಾಲಿನ ಪೌಡರ್ ಪ್ಯಾಕೇಟ್ಗಳು, ಶೇಂಗಾ ಕಾಳು ಸೇರಿದಂತೆ ಸಾಕಷ್ಟು ಪ್ರಮಾಣದ ಆಹಾರ ಪದಾರ್ಥಗಳನ್ನ ಕದ್ದು ಸಾಗಿಸ್ತಿದ್ರಂತೆ. ಗುಣಮಟ್ಟದ ಆಹಾರ ಪದಾರ್ಥಗಳನ್ನ ಸಾಗಿಸಿ, ಅಂಗನವಾಡಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ವಿತರಿಸಲು ಬೂಸ್ಟ್ ಹತ್ತಿದ ಮತ್ತು ಹಾಳಾದ ಪದಾರ್ಥಗಳನ್ನ ವಿತರಿಸ್ತಿದ್ರು ಎನ್ನಲಾಗಿದೆ. ಇದನ್ನ ನೋಡಿ ಬೇಸತ್ತಿದ್ದ ಸ್ಥಳೀಯರು ಇವತ್ತು ಆಹಾರ ಪದಾರ್ಥಗಳನ್ನ ಕದ್ದು ಸಾಗಿಸ್ತಿದ್ದಾಗ ಹಿಡಿದಿದ್ದಾರೆ.
ಸ್ಥಳೀಯರು ಅಂಗನವಾಡಿ ಮುಂದೆ ಜಮಾಯಿಸೋವಷ್ಟರಲ್ಲಿ ಶಿಕ್ಷಕಿ ಮತ್ತು ಅಡುಗೆ ಸಹಾಯಕಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಆಹಾರ ಪದಾರ್ಥಗಳನ್ನ ಕದ್ದು ಸಾಗಿಸ್ತಿದ್ದ ಇವರಿಬ್ಬರ ಮೇಲೆ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಸ್ಥಳೀಯರು ಒತ್ತಾಯಿಸಿದ್ದಾರೆ.