ಹಾವೇರಿ: ಜಿಲ್ಲೆಗೆ ಮುಂಗಾರು ಕಾಲಿಡುತ್ತಿದ್ದಂತೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ತಮ್ಮ ರಾಸುಗಳ ಜೊತೆ ಜಮೀನು ಹಸನು ಮಾಡಿ, ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ.
ಇಷ್ಟೆಲ್ಲಾ ಕಷ್ಟಪಟ್ಟು ನಾವು ಕಾರ್ಯನಿರ್ವಹಿಸುತ್ತೇವೆ. ಭೂಮಿ ತಾಯಿ ಸಹ ಉತ್ತಮ ಫಸಲು ನೀಡುತ್ತಾಳೆ. ಆದರೆ ಸರ್ಕಾರದ ನಿಯಮಗಳು ನಮ್ಮನ್ನು ಪಾತಾಳಕ್ಕೆ ತಳ್ಳುತ್ತಿವೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರಗಳು ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ಬಿತ್ತನೆ ಬೀಜ, ಗೊಬ್ಬರ ದರಗಳನ್ನ ಕಡಿಮೆ ಮಾಡುತ್ತವೆ. ಆದರೆ ವರ್ತಕರು ಅಧಿಕ ದರದಲ್ಲಿ ಮಾರುತ್ತಾರೆ. ಸರ್ಕಾರದ ಬೆಲೆ ಕೇಳಿದರೆ ಸ್ಟಾಕ್ ಇಲ್ಲ ಎನ್ನುತ್ತಾರೆ. ಇನ್ನು ಮೆಕ್ಕೆಜೋಳವನ್ನು ರೈತರು ಮಾರುವ ವೇಳೆ ಕಡಿಮೆ ದರ ಇರುತ್ತೆ. ರೈತರು ಮಾರಿದ ನಂತರ ವರ್ತಕರ ಬಳಿ ಮೆಕ್ಕೆಜೋಳ ಹೋದಾಗ ದರ ಹೆಚ್ಚಾಗುತ್ತೆ. ಹೀಗಾದರೆ ರೈತರು ಹೇಗೆ ಬದುಕಬೇಕು ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ರೈತರು ಮುಂಗಾರು ಮಳೆ ಆಶ್ರಯಿಸಿ ಬೇಸಾಯ ಮಾಡುತ್ತಾರೆ. ಈಗ ಜಿಲ್ಲೆಯಲ್ಲಿ ವರುಣನ ಆಗಮನವಾಗುತ್ತಿದ್ದು, ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಭೂಮಿಯನ್ನ ಹಸನು ಮಾಡಿ ಹದವಿದ್ದರೆ ಬಿತ್ತನೆ ಕಾರ್ಯ ಸಹ ಮಾಡುತ್ತಿದ್ದಾರೆ. ಪ್ರಮುಖವಾಗಿ ಶೇಂಗಾ, ಗೋವಿನಜೋಳ, ಸೋಯಾಬೀನ್, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನ ಇಲ್ಲಿಯ ರೈತರು ಬೆಳೆಯುತ್ತಾರೆ.
ಇದನ್ನೂ ಓದಿ: MRPL: ಟಗ್ ಅಲೈನ್ಸ್ ನೌಕೆ ಮೇಲೆತ್ತುವ ಕಾರ್ಯಾಚರಣೆಗೆ ಪ್ರಯತ್ನ
ಸರ್ಕಾರ ನಮಗೆ ವಿಮೆ ನೀಡುವುದು ಬೇಡ. ಪರಿಹಾರ ಬೇಡ. ನಮಗೆ ಸಮರ್ಪಕ ಬೆಂಬಲ ಬೆಲೆ ನೀಡಿದರೆ ಸಾಕು ಎನ್ನುತ್ತಾರೆ ರೈತರು. ಗೋವಿನಜೋಳ ರೈತರ ಬಳಿ ಇದ್ದಾಗ ಬೆಂಬಲ ಬೆಲೆ ಘೋಷಿಸುವುದಿಲ್ಲ. ಬದಲಿಗೆ ವರ್ತಕರು ಗೋವಿನಜೋಳ ಖರೀದಿಸಿ ಸ್ಟಾಕ್ ಮಾಡಿದಾಗ ಬೆಂಬಲ ಬೆಲೆ ಘೋಷಿಸುತ್ತಾರೆ. ಇದರಿಂದ ಕಷ್ಟ ಪಡುವುದು ನಾವು. ಲಾಭ ಸಿಗುವುದು ವರ್ತಕರಿಗೆ. ಸರ್ಕಾರದ ನಿಯಮಗಳು ರೈತ ಪರವಾಗಿದ್ದರೆ ರೈತನಿಗೆ ಭೂಮಿ ತಾಯಿ ನೀಡುವ ಫಸಲು ಸಾಕು ಎಂದು ಹೇಳಿದ್ದಾರೆ.