ಹಾವೇರಿ: ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ಸ್ಥಳೀಯ ನಾಯಕರಲ್ಲಿ ಅಸಮಾಧಾನ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲು ಆಗಮಿಸಿದ್ದ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಅವರಿಗೆ ಶಿಗ್ಗಾಂವಿ-ಸವಣೂರು ಕ್ಷೇತ್ರದ ಕಾರ್ಯಕರ್ತರು ನೀವೇ ನಮ್ಮ ಕ್ಷೇತ್ರದ ಅಭ್ಯರ್ಥಿಯಾಗಬೇಕು ಎಂದು ಪಟ್ಟುಹಿಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇರುವ ಖಾಸಗಿ ಹೋಟೆಲ್‌ಗೆ ಧಾವಿಸಿದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಬೆಂಬಲಿಗರು, "ನೀವು ಶಿಗ್ಗಾಂವಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಮಾನ ಮಾಡಿದ್ದೀರಿ. ಅಜ್ಜಂಪೀರ್ ಖಾದ್ರಿ ಅವರಿಗೆ ಟಿಕೆಟ್ ಕೈ ತಪ್ಪಲು ನೀವೇ ಕಾರಣ. ಆದ್ದರಿಂದ ಸಿಎಂ ಬೊಮ್ಮಾಯಿ ವಿರುದ್ಧ ನೀವೇ ಅಭ್ಯರ್ಥಿಯಾಗಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ಕಾರ್ಯಕರ್ತರನ್ನು ಸಮಾಧಾನಪಡಿಸಿ ಹೊರಗೆ ಕಳಿಸಲಾಯಿತು. ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಕೇಳದೆ, ಸ್ಥಳೀಯ ನಾಯಕರನ್ನು ಗಣನೆಗೆ ತಗೆದುಕೊಳ್ಳದೆ ಬೇರೆಯವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂದು ಅಜ್ಜಂಪೀರ್ ಖಾದ್ರಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಲೀಂ ಅಹ್ಮದ್, "ನಾನು ಅಭ್ಯರ್ಥಿಯಾಗಬೇಕು ಎನ್ನುವುದು ಕಾರ್ಯಕರ್ತರ ಒತ್ತಾಯ. ಆದರೆ ಹೈಕಮಾಂಡ್ ಯಾವ ರೀತಿ ನಿರ್ದೇಶನ ನೀಡುತ್ತೋ ಆ ರೀತಿ ನಡೆದುಕೊಳ್ಳುವೆ. ಕಾರ್ಯಕರ್ತರ ಮುಖಂಡರ ಭಾವನೆಯನ್ನು ವರಿಷ್ಠರಿಗೆ ತಿಳಿಸುತ್ತೇನೆ" ಎಂದು ಹೇಳಿದರು. ಶಿಗ್ಗಾಂವಿ ಕ್ಷೇತ್ರದಲ್ಲಿನ ಕಾಂಗ್ರೆಸ್ ಭಿನ್ನಮತದ ಬಗ್ಗೆ ಮಾತನಾಡಿ, "ಕ್ಷೇತ್ರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ, ಅದನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ನಮಗೆ ನಂದಿನಿ, ಗೋವು ಎರಡೂ ಮುಖ್ಯ; ಕೆಎಂಎಫ್ ವಿಚಾರದಲ್ಲಿ ಆಧಾರರಹಿತ ಆರೋಪ: ರವಿಕುಮಾರ್
ನಂತರ ಮಾತನಾಡಿ, "ಈ ಕ್ಷೇತ್ರದಿಂದ ಸುಮಾರು 14 ಜನ ಕಾಂಗ್ರೆಸ್ ಮುಖಂಡರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 8 ಜನ ಹಿರಿಯ ಮುಖಂಡರನ್ನು ಆಯ್ಕೆ ಮಾಡಿ ಹೈಕಮಾಂಡ್ಗೆ ಕಳುಹಿಸಿಕೊಟ್ಟಿದ್ದೇವೆ. ಆ ಪಟ್ಟಿಯಲ್ಲಿ ವಿನಯ್ ಕುಲಕರ್ಣಿ ಹೆಸರು ಇರಲಿಲ್ಲ, ವಿನಯ್ ಕುಲಕರ್ಣಿಗೆ ಟಿಕೆಟ್ ನೀಡುವ ಬಗ್ಗೆ ವರಿಷ್ಠರು ಚರ್ಚೆ ಮಾಡಿದ್ದರು" ಎಂದು ಹೇಳಿದರು.
ಅಜ್ಜಂಪೀರ್ ಖಾದ್ರಿ ಮಾತನಾಡಿ, "ಸಲೀಂ ಅಹ್ಮದ್ ಅವರೇ ಅಭ್ಯರ್ಥಿಯಾಗಬೇಕು ಎಂದು ನಮ್ಮ ಕಾರ್ಯಕರ್ತರು ಜೊತೆ ಸೇರಿ ಮನವಿ ಮಾಡಿದ್ದೇವೆ. ಇದರ ಬಗ್ಗೆ ಹೈಕಮಾಂಡ್ ತಿಳಿಸುತ್ತದೆ ಎಂದು ನಮಗೆ ಹೇಳಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2 ಲಕ್ಷ ಮತದಾರರಿದ್ದಾರೆ. ಅದರಲ್ಲಿ ಸಾಕಷ್ಟು ಜನ ಖಾದ್ರಿ ಅವರು ಚುನಾವಣೆಗೆ ನಿಂತರೆ ಬಿಜೆಪಿ ಸೋಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿನ ಆಂತರಿಕ ಗೊಂದಲದಿಂದ ಈ ತೀರ್ಮಾನಕ್ಕೆ ಬಂದಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ : ನವದೆಹಲಿಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸಭೆ: ಯಾವುದೇ ಕ್ಷಣದಲ್ಲೂ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ