ಹಾವೇರಿ: ಒಟಿಎಸ್ ಸೌಲಭ್ಯದಿಂದ ವಂಚಿತ ರೈತನೊಬ್ಬ ಬ್ಯಾಂಕನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಮಾಕನೂರು ಗ್ರಾಮದಲ್ಲಿ ನಡೆದಿದೆ. ಬ್ಯಾಂಕ್ನಲ್ಲಿ ಬೆಳೆಸಾಲ ಮಾಡಿದ್ದ ಸಂಜೀವ ಕುರುಬರ ಅನ್ನೋ ರೈತ ಸಂಜೀವ್ ಆತ್ಮಹತ್ಯೆಗೆ ಮುಂದಾಗಿದ್ದ. ಸಂಜೀವ್ ಬ್ಯಾಂಕನಲ್ಲಿ 3 ಲಕ್ಷದ 45 ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದಾನೆ.
ಈ ಸಾಲಕ್ಕೆ ವರ್ಷದಿಂದ ವರ್ಷಕ್ಕೆ ಬಡ್ಡಿ ಹೆಚ್ಚಾಗಿ ಸುಮಾರು 10 ಲಕ್ಷ ರೂಪಾಯಿ ಆಗಿ ಬೆಳೆದಿದೆ. ಒನ್ ಟೈಮ್ ಸೆಟಲಮೆಂಟ್ (ಒಟಿಎಸ್) ಮಾಡುವಂತೆ ರೈತ ಮನವಿ ಮಾಡಿದ್ದರು ಬ್ಯಾಂಕ್ ಸಿಬ್ಬಂದಿ ಸ್ಪಂದಿಸಿಲ್ಲ. ಬ್ಯಾಂಕ್ ನವರು ಒಟಿಎಸ್ ಮಾಡದೆ ಚಾಲ್ತಿ ಮಾಡಿ ಸಾಲ ಹೆಚ್ಚಾಗಿದೆ ಎಂದು ರೈತ ಆರೋಪಿಸಿದ್ದಾನೆ.
ಸಂಜೀವ್ ಬ್ಯಾಂಕ್ ಸಿಬ್ಬಂದಿಯ ಮುಂದೆಯೇ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಬ್ಯಾಂಕನಲ್ಲಿದ್ದ ಇತರೆ ರೈತರು ಸಂಜೀವನನ್ನು ರಕ್ಷಣೆ ಮಾಡಿದ್ದಾರೆ. ರೈತ ಆತ್ಮಹತ್ಯೆಗೆ ಮುಂದಾಗುತ್ತಿದ್ದಂತೆ ಬ್ಯಾಂಕ್ ಸಿಬ್ಬಂದಿ ಆತಂಕಗೊಂಡಿದ್ದಾರೆ. ಬ್ಯಾಂಕ್ ರೈತರಿಗೆ ಒಟಿಎಸ್ ಸೌಲಭ್ಯ ಜಾರಿಗೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕೆಲ ದಿನಗಳ ಇಂತಹದ್ದೇ ಪ್ರಕರಣದಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ರಾಣೆಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಮೂರು ಎಕರೆ ಹತ್ತು ಗುಂಟೆ ಜಮೀನು ಹೊಂದಿದ್ದ ರೈತ ವಿವಿಧ ಬ್ಯಾಂಕ್ಗಳಲ್ಲಿ ಮತ್ತು ಕೈಸಾಲ ಸೇರಿ ಆರು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಆದರೆ, ಒನ್ ಟೈಂ ಸೆಟ್ಲಮೆಂಟ್ ಯೋಜನೆಯ ಲಾಭ ಸಿಗದಂತೆ ಬ್ಯಾಂಕ್ ಸಿಬ್ಬಂದಿ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಇದರಿಂದ ಯುವ ರೈತ ದರ್ಶನ ಮುದ್ದಪ್ಪನವರ್ ಸಾವನ್ನಪ್ಪಿದ್ದ. ಬ್ಯಾಂಕ್ ಮುಂದೆ ರೈತನ ಶವವಿಟ್ಟು ಕಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.
ಚಿಕ್ಕಮಗಳೂರಿನಲ್ಲಿ ರೈತರ ಆತ್ಮಹತ್ಯೆ: ಮಳೆ ಕೊರತೆಯಿಂದ ಬೆಳೆ ನಾಶವಾಗಿ ಸಾಲಬಾಧೆಯಿಂದ ನೊಂದು ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಚಿಕ್ಕಮಗಳೂರಿನ ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದ ರೈತ ಸತೀಶ್ ಪ್ರಾಣ ಕಳೆದುಕೊಂಡಿದ್ದ. ಇದೇ ರೀತಿ ಮತ್ತೊಬ್ಬ ರೈತ ಮಳೆ ಬಾರದೆ ಬೆಳೆ ಒಣಗಿದ ಪರಿಣಾಮ ಹಾಗೂ ಬೆಳೆಗಾಗಿ ಮಾಡಿದ್ದ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ.
ಇದನ್ನೂ ಓದಿ: ಕೋಲಾರ: ಗ್ರಾಮದ ಸಾವಿರಕ್ಕೂ ಹೆಚ್ಚು ಮಂದಿಯ ವಿರುದ್ಧ FIR ದಾಖಲಿಸಿದ ಪೊಲೀಸರು!