ಹಾವೇರಿ : ಸಾಮಾನ್ಯವಾಗಿ ರೈತರು ಎತ್ತುಗಳನ್ನು ಬಳಸಿಕೊಂಡು ಭೂಮಿಯನ್ನು ಉಳುಮೆ ಮಾಡಿ ಬೇಸಾಯ ಮಾಡುವುದನ್ನು ನೋಡಿರುತ್ತೇವೆ. ಇನ್ನೂ ಕೆಲವು ರೈತರು ಟ್ರ್ಯಾಕ್ಟರ್ ಮತ್ತು ಕೃಷಿ ಉಪಕರಣಗಳನ್ನು ಬಳಸಿ ಉಳುಮೆ ಮಾಡುತ್ತಾರೆ. ಆದರೆ ಜಿಲ್ಲೆಯ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದ ರೈತರೋರ್ವರು ಕೃಷಿ ಕಾರ್ಯಕ್ಕೆ ಟಗರುಗಳನ್ನು ಬಳಸುತ್ತಿದ್ದಾರೆ. ಜಲ್ಲಾಪುರದ ಶೇಖಪ್ಪ ಕುರುಬರ ಎಂಬ ರೈತ ತಮ್ಮ ಒಂದೂವರೆ ಎಕರೆ ಜಮೀನಿನ ಉಳುಮೆಗೆ ಕನಕ ಮತ್ತು ರಾಯಣ್ಣ ಹೆಸರಿನ ಟಗರುಗಳನ್ನು ಬಳಕೆ ಮಾಡುತ್ತಿದ್ದಾರೆ.
ತನ್ನ ಒಂದೂವರೆ ಎಕರೆಯಲ್ಲಿ ಸೋಯಾಬಿನ್ ಬೆಳೆ ಹಾಕಿರುವ ರೈತ ಜಮೀನಿನಲ್ಲಿ ಕಳೆ ಇಲ್ಲದಂತೆ ಎಡೆಕುಂಟಿ ಹೊಡೆಯಲು ಟಗರುಗಳನ್ನು ಬಳಕೆ ಮಾಡುತ್ತಿದ್ದಾರೆ. ಕಳೆದ 9 ತಿಂಗಳ ಹಿಂದೆ ಕುರುಬರ ದೊಡ್ಡಿಯಲ್ಲಿ ಈ ಟಗರುಗಳನ್ನು ಖರೀದಿಸಿರುವ ಶೇಖಪ್ಪ, ತಲಾ 6500 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಈ ಟಗರುಗಳನ್ನು ಶೇಖಪ್ಪ ಅವರು ತಮ್ಮ ಮಕ್ಕಳಂತೆ ಸಾಕಿದ್ದು, ಅವುಗಳಿಗೆ ಬೇಕಾದ ಹಿಂಡಿ, ಬೂಸಾ ಸೇರಿದಂತೆ ಮೊದಲಾದ ಪೌಷ್ಟಿಕ ಆಹಾರಗಳನ್ನು ನೀಡುತ್ತಾರೆ. ಆರಂಭದಲ್ಲಿ ಚಿಕ್ಕ ಬಂಡಿಗೆ ಟಗರುಗಳನ್ನು ಕಟ್ಟಿ ಅಭ್ಯಾಸ ಮಾಡಿಸಿದ್ದಾರೆ. ಆಮೇಲೆ ನೀರು ತರುವ ಬಂಡಿಯನ್ನು ಕುರಿಗಳಿಗೆ ಕಟ್ಟಿ ಅಭ್ಯಾಸ ಮಾಡಿಸಿದ್ದಾರೆ.
ಈ ನಡುವೆ ತನ್ನ ಒಂದೂವರೆ ಎಕರೆ ಜಮೀನು ಎಡೆಕುಂಡಿ ಹೊಡೆಯಲು ಬೇರೆಯವರಲ್ಲಿ ಎತ್ತುಗಳನ್ನು ಕೇಳಿದ್ದಾರೆ. ಆದರೆ ಕಡಿಮೆ ಜಮೀನು ಇರುವುದಕ್ಕೆ ಯಾರು ಶೇಖಪ್ಪರಿಗೆ ಯಾರೂ ಎತ್ತುಗಳನ್ನು ನೀಡಿಲ್ಲ. ಇದರಿಂದ ವಿಚಲಿತನಾಗದ ಶೇಖಪ್ಪರಿಗೆ ಕಣ್ಣಿಗೆ ಬಿದ್ದಿದ್ದು ಈ ಟಗರುಗಳು. ಈಗಾಗಲೇ ನೀರಿನ ಬಂಡಿ ಮತ್ತು ಚಿಕ್ಕಬಂಡಿಗೆ ಕಟ್ಟಿ ಅಭ್ಯಾಸವಾಗಿದ್ದ ಟಗರುಗಳನ್ನು ಉಳುಮೆಗೆ ಬಳಸಲು ಮುಂದಾಗಿದ್ದಾರೆ. ಟಗರುಗಳಿಗೆ ಅನುಕೂಲವಾಗುವಂತೆ ನೊಗ ಸಿದ್ಧಪಡಿಸಿ ಶೇಖಪ್ಪ ಅವರು ಹೊಲದಲ್ಲಿ ಎಡೆಕುಂಟಿ ಹೊಡೆಯಲು ಮುಂದಾಗಿದ್ದಾರೆ. ಮೊದಲೇ ಅಭ್ಯಾಸವಾಗಿದ್ದ ಟಗರುಗಳು ಎತ್ತಿನಂತೆ ಎಡೆಕುಂಟಿ ಹೊಡೆಯಲು ರೈತನಿಗೆ ಸಹಾಯ ಮಾಡಿವೆ. ಶೇಖಪ್ಪನ ಉಪಾಯ ಸುತ್ತಮುತ್ತಲಿನ ರೈತರಿಗೆ ಆಶ್ಚರ್ಯ ತಂದಿದೆ. ಟಗರುಗಳು ಎತ್ತಿನಂತೆ ರೈತನಿಗೆ ಸಹಕಾರಿಯಾಗಿದೆ.
ಓದಿ :100 ಕೋಟಿ ರೂ. ಹಗರಣ: ಬಿಡಿಎ ಜಾಗಕ್ಕೆ ಅಕ್ರಮವಾಗಿ ಬದಲಿ ಜಾಗ ಪಡೆದು ಮಾರಾಟ!