ಹಾವೇರಿ: ಕೋವಿಡ್ ಮಹಾಮಾರಿಯ ನಿಯಂತ್ರಣಕ್ಕಾಗಿ ಸರ್ಕಾರಗಳು ಹರಸಾಹಸ ಪಡುತ್ತಿವೆ. ವಿವಿಧ ಸಂಘ, ಸಂಸ್ಥೆಗಳು ಕೂಡ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿವೆ. ಈ ನಡುವೆ, ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಆಟೋಚಾಲಕ ವೀರಪ್ಪ ಹೆಬ್ಬಳ್ಳಿ ಎಂಬಾತ ಸೋಂಕಿನ ವಿರುದ್ಧದ ಸಮರಕ್ಕೆ ತನ್ನ ಕೈಲಾದ ಸಹಕಾರ ನೀಡುತ್ತಿದ್ದಾರೆ.
ಸ್ಥಳೀಯವಾಗಿ ಆಟೋರಾಜ ಎಂದು ಕರೆಸಿಕೊಳ್ಳುವ ಆಟೋ ಚಾಲಕ ವೀರಪ್ಪ ಹೆಬ್ಬಳ್ಳಿ, ತನ್ನ ಆಟೋಗೆ ಮೈಕ್ ಅಳವಡಿಸಿಕೊಂಡು ರಟ್ಟಿಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ತೆರಳಿ ಜನರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೆ, ತನ್ನ ಆಟೋ ಮೂಲಕವೇ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಆಟೋದಲ್ಲಿ ಕೋವಿಡ್ ಜಾಗೃತಿ ಗೀತೆ ಹಾಕಿಕೊಂಡು ತಿರುಗಾಡುವ ವೀರಪ್ಪ ಹೆಬ್ಬಳ್ಳಿ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಕೋವಿಡ್ ಮುಂಜಾಗೃತೆ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ.
ಗರ್ಭಿಣಿಯರಿಗೆ ತನ್ನ ಆಟೋದಲ್ಲಿ ಉಚಿತ ಸೇವೆ ನೀಡುವ ಈತ, ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ಮತ್ತಿತರ ಅಗತ್ಯ ವಸ್ತುಗಳನ್ನು ಉಚಿತವಾಗಿ ತಲುಪಿಸುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ವೀರಪ್ಪ ಹೆಬ್ಬಳ್ಳಿಯ ಈ ಕಾರ್ಯಕ್ಕೆ ಸಂಘ, ಸಂಸ್ಥೆಯವರು, ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸಮಯದಲ್ಲಿ ಜನರ ಸಂಕಷ್ಟ, ಸಾವು- ನೋವು ಕಂಡು ನೋವಾಯಿತು. ನಾನು ಕೋವಿಡ್ ವಾರಿಯರ್ ಆಗಿ ಕೆಲಸ ಮಾಡದಿದ್ದರೂ, ಅಳಿಲು ಸೇವೆ ಮಾಡುವ ಅವಕಾಶ ಸಿಕ್ಕಿದೆ. ನನ್ನ ಕೈಲಾದಷ್ಟು ಸೇವೆ ಮಾಡುವುದಾಗಿ ಆಟೋ ಚಾಲಕ ವೀರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ನಿಂತ ಮಳೆ ನೀರಿನಲ್ಲಿಯೇ ಮಲಗಿ ಪ್ರತಿಭಟನೆ ನಡೆಸಿದ ಸಾಮಾಜಿಕ ಹೋರಾಟಗಾರ!