ಹಾವೇರಿ : ರಾತ್ರೋರಾತ್ರಿ ಕುರಿದೊಡ್ಡಿಗೆ ಆಗಮಿಸಿದ ಕುರಿಕಳ್ಳರು ಭೀಮಪ್ಪ ಲಮಾಣಿ ಎಂಬುವರ 30 ಕುರಿಗಳನ್ನು ಕದ್ದಿದ್ದಾರೆ. ಕುರಿದೊಡ್ಡಿಯಲ್ಲಿ ಮಲಗಿದ್ದ ಭೀಮಪ್ಪ ಅವರನ್ನು ಹೆದರಿಸಿ ಕಳ್ಳರು ಕುರಿಗಳನ್ನು ಕದ್ದೊಯ್ದಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದಲ್ಲಿ ನಡೆದಿದೆ.
ಬೊಲೆರೋ ವಾಹನದಲ್ಲಿ ಆಗಮಿಸಿದ್ದ ಐವರು ಕಳ್ಳರ ಗ್ಯಾಂಗ್ ಕುರಿಗಳನ್ನು ಕದ್ದಿದೆ. ವಿಕಲಚೇತನರಾಗಿರುವ ಭೀಮಪ್ಪ ಹುಟ್ಟಿದಾಗಿನಿಂದ ಕುರಿ ಸಾಕಾಣಿಕೆಯಲ್ಲಿ ಜೀವನ ಕಳೆಯುತ್ತಿದ್ದಾರೆ. ಕುರಿಗಳನ್ನೇ ತಮ್ಮ ಜೀವನದುದ್ದಕ್ಕೂ ಪ್ರೀತಿಸುತ್ತಾ ಬಂದಿದ್ದ ಭೀಮಪ್ಪ ಅವರಿಗೆ ಕಳ್ಳರ ಕೃತ್ಯ ಇನ್ನಿಲ್ಲದ ದುಃಖ ತಂದಿದೆ. ಇದರಿಂದ ಬೇಸತ್ತ ಭೀಮಪ್ಪ ಕಣ್ಣೀರು ಹಾಕುತ್ತಿದ್ದಾರೆ.
ಸಣ್ಣ ಸಣ್ಣ ಕುರಿಮರಿಗಳನ್ನು ಬಿಟ್ಟು ಅದರ ತಾಯಿಯನ್ನು ಮಾತ್ರ ಕಳ್ಳರು ಹೊತ್ತೊಯ್ದಿದ್ದಾರೆ. ಇವುಗಳಿಗೆ ಹಾಲು ಎಲ್ಲಿಂದ ತರಲಿ ಎಂದು ಭೀಮಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನನಗೆ ಕುರಿಗಳೇ ತಾಯಿ-ತಂದೆ, ಅಕ್ಕ-ಅಣ್ಣ-ತಮ್ಮ, ಸಂಬಂಧಿಕರು ಇವರನ್ನು ಯಾವ ರೀತಿ ಜೋಪಾನ ಮಾಡಲಿ ಎಂದು ಭೀಮಪ್ಪ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾತ್ರಿ ಅಟ್ಟಾಡಿಸಿಕೊಂಡು ಬಂದು ಕಲ್ಲು ಎತ್ತಿಹಾಕಿ ವ್ಯಕ್ತಿ ಕೊಲೆ
ಕುರಿ ಕಳ್ಳತನದಿಂದ ಹಾನಿಯಾದ ಪರಿಹಾರವನ್ನು ಸರ್ಕಾರ ನೀಡಿದರೆ ನಾನು ಬದುಕುತ್ತೇನೆ. ಇಲ್ಲದಿದ್ದರೆ ನಾನು ಸಾಯಲು ಸಿದ್ಧನಾಗಿದ್ದೇನೆ. ಪದೇಪದೆ ಈ ರೀತಿಯ ಘಟನೆಗಳನ್ನು ನೋಡಿ ನನಗೆ ಜೀವನವೇ ಸಾಕಾಗಿ ಹೋಗಿದೆ ಎಂದು ಭೀಮಣ್ಣ ಕಣ್ಣೀರು ಹಾಕಿದ್ದಾರೆ.