ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತರ ಮೇಲೆ ಗೋಲಿಬಾರ್ ನಡೆದು ಇಂದಿಗೆ 12 ವರ್ಷಗಳು. 2008 ರಲ್ಲಿ ಈ ಗೋಲಿಬಾರ್ ನಡೆದಿದ್ದು ರೈತರು ಗೊಬ್ಬರ ಹಾಗೂ ಬಿತ್ತನೆ ಬೀಜಕ್ಕಾಗಿ ಆರಂಭಿಸಿದ ಪ್ರತಿಭಟನೆ ಹಿಂಸಾರೂಪ ತಾಳಿತ್ತು.
ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ಮಾಡಿದ್ದರು. ಈ ಸಮಯದಲ್ಲಿ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿ ಎಂಬ ರೈತರು ಸಾವನ್ನಪ್ಪಿದ್ದರು. ಸಿದ್ದಲಿಂಗಪ್ಪ ಚೂರಿ ಗೋಲಿಬಾರ್ ಆದ ದಿನದಂದೇ ಸಾವನ್ನಪ್ಪಿದರೆ, ಪುಟ್ಟಪ್ಪ ಹೊನ್ನತ್ತಿ ಗೋಲಿಬಾರ್ ದಿನ ತೀವ್ರವಾಗಿ ಗಾಯಗೊಂಡು ಕೆಲವು ದಿನಗಳ ನಂತರ ಸಾವನ್ನಪ್ಪಿದರು.
ಈ ಕರಾಳ ದಿನವನ್ನು ರೈತ ಸಂಘಟನೆಗಳು ಹಾವೇರಿಯಲ್ಲಿ ಪ್ರತಿವರ್ಷ ರೈತ ಹುತಾತ್ಮ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರುತ್ತಿವೆ. ಪ್ರತಿ ವರ್ಷ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಸಮಾಧಿ ಹಾಗೂ ಸಿದ್ದಪ್ಪ ವೃತ್ತದಲ್ಲಿರುವ ರೈತ ಹುತಾತ್ಮ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಪರ ಜಯಘೋಷಣೆ ಕೂಗಲಾಗುವುದು.