ಅರಕಲಗೂಡು: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತಿಂಗಳಿಗೆ ಎರಡು ಬಾರಿ ನಡೆಯುತ್ತಿರುವ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ವಿಸ್ತರಣೆ ಮಾಡಬೇಕೆಂದು ಜಿಪಂ ಸದಸ್ಯ ರೇವಣ್ಣ ಆಗ್ರಹಿಸಿದರು.
ಸೋಮವಾರ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಹೆಸರು ನೋಂದಾಯಿಸಿಕೊಳ್ಳಲು ಮಹಿಳೆಯರು ಹಸುಗೂಸು, ಪೋಷಕರೊಂದಿಗೆ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸೇರಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ರೇವಣ್ಣ, ಹಸುಗೂಸುಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಹೆಸರು ನೋಂದಣಿ ಮಾಡಿಸಿಕೊಳ್ಳಲು ನಿಂತಿದ್ದ ಮಹಿಳೆಯರನ್ನು ಕಂಡು ಗಾಬರಿಗೊಂಡರು.
ಕೊರೊನಾ ಹಿನ್ನೆಲೆ ತಿಂಗಳಲ್ಲಿ 2 ಬಾರಿ ತಲಾ 10 ಮಂದಿಯಂತೆ ಒಟ್ಟು 20 ಮಂದಿ ಮಹಿಳೆಯರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಪ್ರಸ್ತುತ ತಾಲೂಕಿನಲ್ಲಿ ಅಂದಾಜು 150 ಮಂದಿ ಚಿಕಿತ್ಸೆ ಮಾಡಿಸಿಕೊಳ್ಳುವರಿದ್ದಾರೆ. ಈ ಸಂಖ್ಯೆ ತಿಂಗಳು ಕಳೆದಂತೆ ಮತ್ತೆ ಹೆಚ್ಚಾಗಲಿದೆ. ಹೀಗಿದ್ದರೂ ಕೂಡ ಕೇವಲ 20 ಮಂದಿಗೆ ಅವಕಾಶ ಮಾಡಿಕೊಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅ. 13ರಂದು ಈ ಆಸ್ಪತ್ರೆಯಲ್ಲಿ 10 ಮಂದಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಯಲಿದೆ. ಈ ಸಲುವಾಗಿ ಒಂದು ದಿನ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಆದರಿಂದ 50ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪುಟ್ಟ ಪುಟ್ಟ ಮಕ್ಕಳೊಂದಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಹಿಳೆಯರು ಮುಂಜಾನೆಯಿಂದಲೇ ಬಂದು ಆಸ್ಪತ್ರೆಯ ಮುಂಭಾಗ ಕುಳಿತಿದ್ದರು.
ಕೊರೊನಾ ಸಂದರ್ಭದಲ್ಲಿ ಇದು ಆರೋಗ್ಯಕರ ಬೆಳವಣಿಗೆಯಲ್ಲ. ಆಸ್ಪತ್ರೆಯ ಕೆಲ ಸಿಬ್ಬಂದಿ, ವೈದ್ಯರಿಗೆ ಕೊರೊನಾ ಸೋಂಕು ಬಂದು ಹೋಗಿದೆ. ಅಲ್ಲದೆ ಸೋಂಕು ಬಂದಿರುವ ವ್ಯಕ್ತಿಗಳು ಆಸ್ಪತ್ರೆಗೆ ಬಂದು ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿರುವುದು ಹಸುಗೂಸುಗಳ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಇಡೀ ಕುಟುಂಬ, ಸಮಾಜ ಕೊರೊನಾ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಸಂತಾನ ಹರಣ ಶಸ್ತ್ರಚಿಕಿತ್ಸೆ ಸಂಖ್ಯೆಯನ್ನು ಹೆಚ್ಚಿಸಬೇಕು. ಅಲ್ಲದೆ ತಿಂಗಳಿಗೆ 4 ಬಾರಿ ದಿನಾಂಕ ನಿಗದಿ ಮಾಡಿದರೆ ಒಳಿತು. ಜಿಲ್ಲಾ ಆರೋಗ್ಯಾಧಿಕಾರಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಕೊರೊನಾ ಸಂದರ್ಭದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಭಯವನ್ನುಂಟುಮಾಡಿದೆ. ಈ ಚಿಕಿತ್ಸೆ ಅತ್ಯವಶ್ಯಕವಾಗಿರುವ ಹಿನ್ನೆಲೆ ಮತ್ತು ಕೇವಲ 10 ಮಂದಿಗೆ ಅವಕಾಶವಿರುವ ಸಲುವಾಗಿ ಬೆಳಗ್ಗೆಯಿಂದಲೇ ಪುಟ್ಟ ಮಗುವಿನೊಂದಿಗೆ ಆಸ್ಪತ್ರೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಹೆಸರು ನೋಂದಾಯಿಸಿಕೊಂಡಿದ್ದೇನೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆಯೊಬ್ಬರು ತಿಳಿಸಿದರು.