ಹಾಸನ: ಒಂದೆಡೆ ಕೊರೊನಾ ಸೋಂಕಿಗೆ ಒಳಪಟ್ಟ ಕುಟುಂಬದವರನ್ನು ಉಳಿಸಿಕೊಳ್ಳಲು ಜನ ಹರಸಾಹಸ ಪಡುತ್ತಿದ್ದಾರೆ. ಆದರೆ ಇಲ್ಲೋರ್ವ ತನ್ನ ತಂದೆಯನ್ನು ಉಳಿಸಿಕೊಳ್ಳಲು ಆಸ್ಪತ್ರೆಗೆ ಹಣ ಕಟ್ಟಲು ಸಾಧ್ಯವಾಗದೆ ಕಣ್ಣೀರಿಟ್ಟು ವಿಡಿಯೋ ಮೂಲಕ ತನ್ನ ನೋವನ್ನು ಹೇಳಿಕೊಂಡಿದ್ದಾನೆ.
ಇಂತಹ ಒಂದು ಘಟನೆ ನಡೆದಿರುವುದು ಹಾಸನ ನಗರದ ಸ್ಪರ್ಶ ಆಸ್ಪತ್ರೆಯ ಮುಂಭಾಗದಲ್ಲಿ. ಮೂಲತಃ ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದ ಪವನ್ ಎಂಬಾತ ವಿಡಿಯೋ ಮಾಡಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾನೆ.
ನಮ್ಮದು ತುಂಬಾ ಬಡತನದಿಂದ ಬಂದಿರುವ ಕುಟುಂಬ. ನನ್ನ ತಂದೆ ಸಿದ್ದರಾಮಣ್ಣ ಅವರಿಗೆ 4 ದಿನಗಳ ಹಿಂದೆ ಹೃದಯಾಘಾತದ ಜೊತೆಗೆ ಸ್ಟ್ರೋಕ್ ಆಗಿದೆ. ಹಾಗಾಗಿ ತಿಪಟೂರು ತಾಲೂಕಿನಿಂದ ತುರ್ತು ವಾಹನದಲ್ಲಿ ಹಾಸನದ ಸ್ಪರ್ಶ ಆಸ್ಪತ್ರೆಗೆ ಬಂದು ದಾಖಲಿಸಿದ್ದೆ. ಆದರೆ ಈ ಆಸ್ಪತ್ರೆಯಲ್ಲಿ ದುಬಾರಿ ಹಣ ನೀಡಿ ಚಿಕಿತ್ಸೆ ಕೊಡಿಸಲು ನನಗೆ ಸಾಧ್ಯವಾಗುತ್ತಿಲ್ಲ. ಆಡಳಿತ ಮಂಡಳಿ ಹಣ ಕಟ್ಟಲು ಸಾಧ್ಯವಾಗದಿದ್ದರೆ ನೀವು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಯುವಕ ಆರೋಪಿಸಿದ್ದಾರೆ.
ಮುಖ್ಯಮಂತ್ರಿಯವರೇ, ನನಗೆ ಸ್ಪರ್ಶ ಆಸ್ಪತ್ರೆಯಲ್ಲಿ ದುಬಾರಿ ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದರೆ ನನ್ನ ತಂದೆಯನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ದಯಮಾಡಿ ನಮಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ನಮ್ಮ ತಂದೆಯನ್ನು ಉಳಿಸಿಕೊಡಿ ಎಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾನೆ.
ಓದಿ: ಎಲ್ಲದಕ್ಕೂ ಕೇಂದ್ರದ ಕಡೆ ನೋಡದೆ ರಾಜ್ಯ ಸರ್ಕಾರ ಸ್ವತಂತ್ರ ನಿರ್ಧಾರ ಕೈಗೊಳ್ಳಲಿ: ಹೆಚ್ಡಿಕೆ