ಹಾಸನ : ಯುವತಿ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಹಲ್ಲೆಗೊಳಗಾಗಿದ್ದ ಯುವಕನೋರ್ವ ತಿಂಗಳ ಬಳಿಕ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ.
ಅಶ್ವಥ್ (28) ಅನುಮಾನಸ್ಪದವಾಗಿ ಕೊನೆಯುಸಿರೆಳೆದಿರೋ ಯುವಕನಾಗಿದ್ದು, ಕಳೆದ ತಿಂಗಳ ಏ.28ರಂದು ಯುವತಿಯ ಕಡೆಯುವರು ಹಲ್ಲೆ ನಡೆಸಿದ್ದರಿಂದ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಆತ ಕೊನೆಯುಸಿರೆಳೆದಿದ್ದಾನೆ ಎಂಬುದು ಪೋಷಕರು ನೀಡಿದ ದೂರಿನಲ್ಲಿ ತಿಳಿದು ಬಂದಿದೆ.
ಹಾಸನ ತಾಲೂಕಿನ ಎಸ್. ಬಂಡೀಹಳ್ಳಿಯಲ್ಲಿ ಯುವತಿ ವಿಚಾರಕ್ಕೆ ಸಂಬಂಧಪಟ್ಟಂತೆ ಏ. 28 ರಂದು ನಡೆದ ಗಲಾಟೆಯಲ್ಲಿ ಹಾಸನ ತಾಲೂಕಿನ ಗಾಡೇನಹಳ್ಳಿ ಗ್ರಾಮದ ಅಶ್ವತ್ಥ್ ಗಂಭೀರವಾಗಿ ಗಾಯಗೊಂಡಿದ್ದ.
ಯುವತಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಈ ಗಲಾಟೆ ನಡೆದಿದ್ದು, ಯುವತಿಯೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಇಟ್ಟುಕೊಳ್ಳಬಾರದೆಂದು ಹಲವು ಬಾರಿ ಬಂಡೀಹಳ್ಳಿ ಗ್ರಾಮಸ್ಥರು ಅಶ್ವತ್ಥ್ ಪೋಷಕರನ್ನ ಕರೆದು, ನಿಮ್ಮ ಮಗನಿಗೆ ಬುದ್ದಿ ಹೇಳಿ ಅಂತ ತಿಳಿಸಿದ್ದರು ಎನ್ನಲಾಗಿದೆ.
ಆದರೆ, ಅಶ್ವತ್ಥ್ ಮಾತ್ರ ಸುಮ್ಮನಾಗದೇ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನೇ ಮದುವೆಯಾಗುವುದಾಗಿ ಹೇಳಿದ್ದ. ಗಲಾಟೆಯ ಬಳಿಕ ಪಾನಮತ್ತನಾಗಿ ಬಂಡಿಹಳ್ಳಿ ಗ್ರಾಮಕ್ಕೆ ಗಲಾಟೆ ಮಾಡಿದ ಹಿನ್ನೆಲೆ ಗ್ರಾಮಸ್ಥರು ಅಶ್ವತ್ಥ್ಗೆ ಥಳಿಸಿದ್ದರು.
ನಂತರ ರಾಜಿ ಪಂಚಾಯ್ತಿ ಮೂಲಕ ಸಮಸ್ಯೆ ಬಗೆಹರಿದಿತ್ತು. ಆದ್ರೆ, ಕಳೆದ ಮೂರು ದಿನಗಳ ಹಿಂದೆ ಅಶ್ವತ್ಥ್ ಇದಕ್ಕಿದ್ದಂತೆ ತಲೆಸುತ್ತಿ ಬಿದ್ದಿದ್ದಾನೆ. ಕೂಡಲೇ ಪೋಷಕರು ಹಾಸನದ ಖಾಸಗಿ ಆಸ್ಪತ್ರೆಗೆ ಆತನನ್ನು ದಾಖಲಿಸಿದ್ದರು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.
ಪೋಷಕರು ದೂರಿನಲ್ಲಿ ನನ್ನ ಮಗ ಮತ್ತು ಆತನ ಸ್ನೇಹಿತ ರವಿಕುಮಾರ್ ಎಂಬುವರು ಎಸ್.ಬಂಡಿಹಳ್ಳಿಯಲ್ಲಿ ನಡೆದ ಮದುವೆಗೆಂದು ಹೋಗಿದ್ದರು.
ಆ ಸಮಯದಲಿ ದೇವಸ್ಥಾನದ ಬಳಿ ಎಸ್.ಬಂಡೀಹಳ್ಳಿ ಗ್ರಾಮದ ಶ್ರೀಧರ್ ಮತ್ತು ನನ್ನ ಮಗನ ನಡುವೆ ಗಲಾಟೆ ನಡೆದಿದೆ. ಆತನ ಜೊತೆಯಲ್ಲಿದ್ದ ಪುನೀತ್ @ಪೇಡಾ, ದಿನೇಶ್, ರಾಜಣ್ಣ, ಯೋಗೇಶ್, ಅಭಿಷೇಕ @ ಅಭಿ ಮತ್ತು ಮಿಲ್ಟ್ರಿ ಚೇತು ಸೇರಿದಂತೆ ನನ್ನ ಮಗನ ಮೇಲೆ ಏಕಾಏಕಿ ದೊಣ್ಣೆ ಮತ್ತು ಕಲ್ಲುಗಳಿಂದ ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ನಂತರ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಅಶ್ವಥ್ನ ತಲೆಯ ಸ್ಕ್ಯಾನಿಂಗ್ ಮಾಡಿದಾಗ ರಕ್ತ ಹೆಪ್ಪುಗಟ್ಟಿದೆ ಎಂದು ಗೊತ್ತಾಗಿದ್ದು, ಪ್ರಜ್ಞೆ ಬಂದ ಮೇಲೆ ಆಪರೇಷನ್ ಮಾಡುತ್ತೆವೆಂದು ವೈದ್ಯರು ತಿಳಿಸಿದ್ದರು.
ಆದರೆ, ಪ್ರಜ್ಞೆಯೆ ಬಾರದ ಹಿನ್ನೆಲೆ ನಿನ್ನೆ ಮೃತಪಟ್ಟಿದ್ದಾನೆ. ಹೀಗಾಗಿ, ಈತನ ಸಾವಿಗೆ ಮೇಲ್ಕಂಡ 07 ಜನ ಮತ್ತು ಇತರರು ಕಾರಣವಾಗಿದ್ದು, ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಂದೆ ದೇವರಾಜ್ ಶಾಂತಿಗ್ರಾಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿಂದೆ ನಡೆದ ಗಲಾಟೆಯಲ್ಲಿ ಏನಾದ್ರೂ ತಲೆಗೆ ಪೆಟ್ಟು ಬಿತ್ತೋ ಅಥವಾ ಸ್ವಾಭಾವಿಕವಾಗಿ ಏನಾದ್ರು ಅಶ್ವತ್ಥ್ ಮೃತಪಟ್ಟನೋ ಅನ್ನೋದು ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಬೇಕಿದೆ.
ಈ ಸಂಬಂಧ ಮೃತ ಯುವಕನ ಪೋಷಕರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಓದಿ: ಕೊರೊನಾ 2ನೇ ಅಲೆ ತಡೆಯುವಲ್ಲಿ ಮೋದಿ-ಯಡಿಯೂರಪ್ಪ ಸಂಪೂರ್ಣ ವಿಫಲ: ಸಿದ್ದರಾಮಯ್ಯ