ಹಾಸನ: ಈ ಯುವಕ ಓದಿದ್ದು ಪದವಿ. ಉದ್ಯೋಗಕ್ಕಾಗಿ ಅರ್ಜಿ ಹಿಡಿದುಕೊಂಡು ಮೈಸೂರು, ಬೆಂಗಳೂರು, ಹಾಸನ ಹೀಗೆ ರಾಜ್ಯದ ನಾನಾ ಕಡೆಗಳಲ್ಲಿ ಅಲೆದಾಡಿದ್ದಾರೆ. ಆದ್ರೆ, ಯಾವ ಕಂಪನಿಯೂ ಇವರಿಗೆ ಕೆಲಸ ಕೊಡಲಿಲ್ಲ. ಕೊನೆಗೆ ಈ ಯುವಕ ಕಂಡುಕೊಂಡ ಹಾದಿ ಮೊಲ ಸಾಕಾಣಿಕೆ.
ಈ ಯುವಕನ ಹೆಸರು ಸುನಿಲ್. ಹಾಸನ ತಾಲೂಕಿನ ತೇಜೂರು ಗ್ರಾಮದ ನಿವಾಸಿ. ಪ್ರಾಥಮಿಕ ಹಾಗೂ ಪದವಿ ವಿದ್ಯಾಭ್ಯಾಸವನ್ನು ಸ್ವಗ್ರಾಮ ತೇಜೂರು ಹಾಗೂ ಹಾಸನದಲ್ಲಿ ಮುಗಿಸಿದ್ದಾರೆ. ಬಳಿಕ ಉದ್ಯೋಗವನ್ನರಸಿ ಬೆಂಗಳೂರು-ಮೈಸೂರು ಸೇರಿದಂತೆ ಹಲವು ಕಡೆ ಸಾಕಷ್ಟು ಕಂಪನಿಗಳಿಗೆ ಅರ್ಜಿ ಹಿಡಿದುಕೊಂಡು ತಿರುಗಾಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಇಂಗ್ಲಿಷ್ ಬಾರದ ಕಾರಣ ಕಂಪನಿಗಳು ಇವರಿಗೆ ಕೆಲಸ ಕೊಡಲು ನಿರಾಕರಿಸಿದವಂತೆ.
ಇದರಿಂದ ಬೇಸತ್ತು ಕೊನೆಗೆ ತಮ್ಮ ಸ್ವಗ್ರಾಮಕ್ಕೆ ವಾಪಸ್ಸಾಗಿ ಸ್ವಯಂ ಉದ್ಯೋಗದ ಕಡೆಗೆ ಮುಖ ಮಾಡಿದ್ದಾರೆ. ಈ ವೇಳೆ ಇವರ ತಲೆಗೆ ಹೊಳೆದಿದ್ದು ಮೊಲ ಸಾಕಾಣಿಕೆ. ಇದನ್ನೇ ಆಯ್ಕೆ ಮಾಡಿಕೊಂಡು ಕಳೆದ ಎರಡು ವರ್ಷಗಳ ಹಿಂದೆ ಶುರು ಮಾಡಿದ ಈ ಕೃಷಿ ಈಗ ಇವರ ಬದುಕಿಗೆ ಆಸರೆಯಾಗಿದೆ.
ಆರಂಭದಲ್ಲಿ ಮೊಲ ಸಾಕಾಣಿಕೆಯ ಬಗ್ಗೆ ಇವರಿಗೆ ಮಾಹಿತಿ ಇರಲಿಲ್ಲ. ಸಾಧನೆಯ ಛಲದೊಂದಿಗೆ ಖಾಸಗಿ ಬ್ಯಾಂಕೊಂದರಲ್ಲಿ ಸಾಲ ಪಡೆದಿದ್ದಾರೆ. ಬಳಿಕ ರಾಜ್ ರಾಬಿಟ್ ಫಾರ್ಮ್ ಎಂದು ಹೆಸರಿಟ್ಟು ಕೆಲಸ ಶುರುಮಾಡಿದ್ದರು.
ವರ್ಷಕ್ಕೆ 4-5 ಬಾರಿ ಮರಿ ಹಾಕುವ ಮೊಲ, ಒಂದು ಬಾರಿಗೆ 5 ರಿಂದ 6 ಮರಿ ಹಾಕುತ್ತವೆ. ಮೊಲದ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಕೆ.ಜಿ ಗೆ 250 ರೂ ಬೆಲೆ ಇದೆ. ಈ ಮೊಲಗಳು ನಾಲ್ಕೂವರೆ ತಿಂಗಳಲ್ಲಿ ಸರಾಸರಿ 2 ಕೆ.ಜಿ ತೂಗುತ್ತವೆ. ಇವರ ಫಾರಂನಲ್ಲಿ 500 ಮೊಲಗಳಿದ್ದು, ಹೊರ ರಾಜ್ಯಗಳಿಗೆ ರಫ್ತು ಮಾಡುತ್ತಾರಂತೆ. ಇವುಗಳಿಗೆ ಮೆಂತ್ಯ, ರಾಗಿ-ಜೋಳ ನೀಡಿ ಸಾಕುತ್ತಿದ್ದಾರೆ. ಇನ್ನು ಪ್ರತಿ ವಾರಕ್ಕೊಮ್ಮೆ ಮೊಲಗಳ ಆರೋಗ್ಯ ತಪಾಸಣೆ ಮಾಡಿಸುತ್ತಾರೆ.
ಕಳೆದ ಎರಡು ವರ್ಷಗಳಲ್ಲಿ ಮೊಲ ಸಾಕಾಣಿಕೆಯಲ್ಲಿ ತೊಡಗಿರುವ ಇವರ ಫಾರಂನಲ್ಲಿ 500ಕ್ಕೂ ಹೆಚ್ಚು ಮೊಲಗಳಿವೆ. ನಮ್ಮ ಮೊಲಗಳಿಗೆ ಮಂಗಳೂರು, ಬೆಂಗಳೂರು, ಹೈದರಾಬಾದ್ ಮತ್ತು ಕೇರಳದಲ್ಲಿ ಬೇಡಿಕೆ ಇದೆ. ಹಾಗೆಯೇ ತುಮಕೂರು, ಬೆಂಗಳೂರು, ಪೂನಾದವರು ಪ್ರಯೋಗಾಲಯಕ್ಕೆ ಇಲ್ಲಿನ ಮೊಲಗಳನ್ನು ಖರೀದಿಸುತ್ತಿದ್ದಾರೆ. ವರ್ಷಕ್ಕೆ ಸದ್ಯ 5 ಲಕ್ಷಕ್ಕೂ ಅಧಿಕ ಲಾಭ ಗಳಿಸುತ್ತೇನೆ ಎನ್ನುತ್ತಾರೆ ಸುನಿಲ್.
ಇಂಗ್ಲಿಷ್ ಭಾಷೆಯನ್ನು ಇವರು ಸುಲಲಿತವಾಗಿ ಮಾತನಾಡುತ್ತಿದ್ದರೂ ಇವರು ಇಂದು ಯಾವುದೋ ಕಂಪನಿಯಲ್ಲಿ ಅಡಿಯಾಳಾಗಿ ಕೆಲಸ ಮಾಡುತ್ತಿದ್ದರೋ ಏನೋ.. ಆದ್ರೀಗ, ಸ್ವಯಂ ಉದ್ಯೋಗದಲ್ಲಿ ತನಗೆ ತಾನೇ ಬಾಸ್ ಎನ್ನುತ್ತಾ ಆತ್ಮವಿಶ್ವಾಸದಿಂದ ಬದುಕು ಸಾಗಿಸುತ್ತಿದ್ದಾರೆ.