ಹಾಸನ: ಜಮೀನಿನಲ್ಲಿ ಹಾವು ಕಚ್ಚಿ ಯುವ ರೈತ ಸಾವನ್ನಪ್ಪಿರುವ ಘಟನೆ ಹಾಸನದ ಹೊಳೆನರಸೀಪುರದಲ್ಲಿ ನಡೆದಿದೆ. ದೇವರಗುಡ್ಡೇನಹಳ್ಳಿ ಗ್ರಾಮದ ನಿವಾಸಿ ಅಭಿಲಾಷ್ (27) ಮೃತಪಟ್ಟಿದ್ದಾರೆ.
ಭಾನುವಾರ ರಾತ್ರಿ ಅಭಿಲಾಷ್ ಬೆಳೆಗೆ ನೀರು ಹಾಯಿಸಲು ಜಮೀನಿಗೆ ತೆರಳಿದ್ದರು. ತೆಂಗಿನ ಸಸಿಗಳಿಗೆ ನೀರುಣಿಸಲು ಮುಂದಾದಾಗ, ಹಾವಿನ ಮೇಲೆ ಗೊತ್ತಿಲ್ಲದೆ ತುಳಿದಿದ್ದಾರೆ. ಪರಿಣಾಮ ವಿಷಪೂರಿತ ಹಾವು ಕಚ್ಚಿದೆ. ತಕ್ಷಣ ಹೊಳೆನರಸೀಪುರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಅಭಿಲಾಷ್ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತೋಟಗಾರಿಕೆ ಮತ್ತು ಜಾನುವಾರು ಸಾಕಣೆಯಲ್ಲಿ ಅಭಿಲಾಷ್ ತೊಡಗಿದ್ದು, ಹೊಳೆನರಸೀಪುರದಲ್ಲಿ ಯುವ ರೈತ ಪ್ರಶಸ್ತಿಗೆ ಭಾಜನರಾಗಿದ್ದರು. ಹಳ್ಳಿ ಮೈಸೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಜಗಳ-ವಿಷ ಸೇವಿಸಿ ಮಹಿಳೆ ಸಾವು: ಅಕ್ಕಪಕ್ಕದ ಮನೆಯವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ತಾಲೂಕಿನ ಕಚಕನೂರ ಗ್ರಾಮದಲ್ಲಿ ನಡೆದಿದೆ. ಮನೆ ಮುಂದೆ ನೀರು ಬಿಟ್ಟ ವಿಚಾರಕ್ಕೆ ಜಗಳ ನಡೆದಿದ್ದು, ಅ. 21ರಂದು ವಿಜಯಲಕ್ಷ್ಮೀ ವಿಷ ಸೇವಿಸಿದ್ದರು. ಸಾಸನೂರ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.