ಹಾಸನ : ಲಾಕ್‍ಡೌನ್‍ನಿಂದಾಗಿ ತನ್ನ ನೂರು ಮೇಕೆಗಳೊಂದಿಗೆ ಒಂದು ತಿಂಗಳು ರಾಜಸ್ಥಾನದಲ್ಲಿ ಸಿಲುಕಿದ್ದ ಹಾಸನದ ಯುವ ರೈತ ಎಂಎಲ್‍ಸಿ ಗೋಪಾಲಸ್ವಾಮಿ ಸಹಾಯದಿಂದ ಊರಿಗೆ ವಾಪಸಾಗಿದ್ದಾರೆ. ಲಾಕ್‍ಡೌನ್‍ನಲ್ಲಿ ಗೊತ್ತು ಗುರಿಯಿಲ್ಲದ ಊರಲ್ಲಿ ಒಂದು ತಿಂಗಳು ಮೇಕೆ ಸಾಕುತ್ತಾ ಬದುಕಿದ ತನ್ನ ಕತೆ ಬಿಚ್ಚಿಟ್ಟಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಡದಹಳ್ಳಿ ಗ್ರಾಮದ ಯುವ ರೈತ ಸಂತೋಷ್, ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ಸಲುವಾಗಿ ಮೇಕೆ ತರಲು ರಾಜಸ್ಥಾನಕ್ಕೆ ತೆರಳಿದ್ದರು. ನೂರು ಮೇಕೆ ಕೊಂಡು ವಾಪಸಾಗಬೇಕು ಅನ್ನೋವಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಗಿತ್ತು.
ಇದರಿಂದ ಹೆದರಿದ ಯುವ ರೈತ ಮೇಕೆ ಕೊಂಡುಕೊಂಡವರ ಬಳಿ ತನ್ನ ಕಷ್ಟ ಹೇಳಿಕೊಂಡು, ಈ ಪರಿಸ್ಥಿತಿಯಲ್ಲಿ ನಾನೊಬ್ಬನೇ ಊರಿಗೆ ಹೋಗೋಕೆ ಕಷ್ಟವಾಗುತ್ತಿದೆ. ಮೇಕೆ ನೀವೇ ಇಟ್ಟುಕೊಂಡು ನನ್ನ ಹಣ ವಾಪಸ್ ಕೊಟ್ಟು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು. ಆದರೆ, ಅವರು ಮೇಕೆಗಳನ್ನು ಮಾರಿಯಾಗಿದೆ. ಇನ್ನು ನೀವುಂಟು, ನಿಮ್ಮ ಮೇಕೆಯುಂಟು ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ್ದಾರೆ.
ಹೇಗಾದರೂ ಮಾಡಿ ಹಿಡಿದ ಕೆಲಸ ಬಿಡಬಾರದು ಎಂದು ಹಠತೊಟ್ಟ ಯುವ ರೈತ ಒಂದು ತಿಂಗಳು ರಾಜಸ್ಥಾನದಲ್ಲೇ ಕಷ್ಟಪಟ್ಟು ಮೇಕೆ ಸಾಕಿದ್ದಾರೆ. ಮೇಕೆ ಖರೀದಿ ಮಾಡಿದವರ ಬಳಿಯೇ ಮೇಕೆಗಳಿಗೆ ಮೇವು ಖರೀದಿಸಿ ಅಲ್ಲಿಯೇ ಮೇಕೆ ನೋಡಿಕೊಂಡು ಉಳಿದುಕೊಂಡಿದ್ದಾರೆ. ಆದರೆ, ಅಲ್ಲಿನ ವ್ಯಾಪಾರಿಗಳು ದುಡ್ಡು ಕೊಟ್ಟರೂ ಸರಿಯಾದ ಮೇವು ನೀಡಲಿಲ್ಲ ಎಂದು ರೈತ ಸಂತೋಷ್ ತನ್ನ ನೋವವನ್ನು ತೋಡಿಕೊಂಡಿದ್ದಾರೆ.
ಈ ವೇಳೆ ಸರಿಯಾದ ಮೇವು ಸಿಗದೆ ಹತ್ತು ಮೇಕೆಗಳು ಸಾವನ್ನಪ್ಪಿವೆ. ಹೀಗಾಗಿ ನನಗೆ ನಷ್ಟವಾಗಿದೆ ಎಂದು ಸಂತೋಷ್ ತಿಳಿಸಿದ್ದಾರೆ. ಒಂದು ತಿಂಗಳು ರಾಜಸ್ಥಾನದಲ್ಲಿ ಹೋರಾಟದ ಬದುಕು ಸಾಗಿಸಿದ ನಂತರ ಉಳಿದ ಮೇಕೆಗಳೊಂದಿಗೆ ಊರಿಗೆ ವಾಪಸ್ಸಾಗಿರುವ ಯುವ ರೈತ ರಾಜಸ್ಥಾನ ಟು ಹಾಸನ ಜರ್ನಿಯ ಸಾಹಸಗಾಥೆ ಹೇಳಿಕೊಂಡಿದ್ದಾರೆ.