ಹಾಸನ: ಎತ್ತಿನಹೊಳೆ ಯೋಜನೆ ಪರಿಶೀಲನೆಗೆ 2 ಬಾರಿ ಬಂದಿದ್ದೇನೆ. ಆದರೆ, ಈ ಯೋಜನೆಯ ಪ್ರಗತಿ ನನಗೆ ಸಮಾಧಾನ ತಂದಿಲ್ಲ. ಎಲ್ಲರಿಗೂ ಒಂದು ಕಾಲ ಮಿತಿ ನಿಗದಿ ಮಾಡಿ 100 ದಿನದಲ್ಲಿ ನೀರು ಹರಿಸುವಂತೆ ಸೂಚನೆ ನೀಡಿದ್ದೇನೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇಲ್ಲಿ 24 ಟಿಎಂಸಿ ಲಭ್ಯ ನೀರನ್ನು ಬಳಕೆ ಮಾಡುತ್ತೇವೆ. ಈ ಯೋಜನೆ ಕೋಲಾರದವರೆಗೂ ತಯಾರಾಗಿದೆ. 24 ಸಾವಿರ ಕೋಟಿ ರೂ. ಯೋಜನೆ ಇದಾಗಿದೆ. ಈಗಾಗಲೇ 14 ಸಾವಿರ ಕೋಟಿ ಖರ್ಚಾಗಿದೆ. ಹಾಗಾಗಿ ನಾನೇ ಖುದ್ದು ಬಂದು ಯೋಜನೆ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿರುವೆ. ಆದರೆ ಇಲ್ಲಿ ಕಂಟ್ರಾಕ್ಟರ್ ಹಾಗೂ ಅಧಿಕಾರಿಗಳು ಅನೇಕ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಗುತ್ತಿಗೆದಾರರು ಕೆಲಸ ಮಾಡಲು ಸಾಕಷ್ಟು ಅಡಚಣೆಗಳಿವೆ. ಅದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಅವರು ಒಪ್ಪಿ ಇದಕ್ಕೆ ಸಹಕಾರ ನೀಡುತ್ತೇವೆ ಎಂದಿದ್ದಾರೆ. ಯಾರೋ ಒಬ್ಬ 10 ಸಾವಿರ ಅಡಿ ಜಮೀನು ಇಟ್ಟುಕೊಂಡು ಯೋಜನೆ ಮುಂದುವರಿಯಲು ಬಿಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಅದನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ" ಎಂದರು.
100 ದಿನದಲ್ಲಿ ನೀರು ಹರಿಸುವಂತೆ ಸೂಚನೆ: ಇನ್ನು 100 ದಿನದಲ್ಲಿ ನೀರನ್ನು ಪಂಪ್ ಔಟ್ ಮಾಡಬೇಕು. ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೇರಿದಂತೆ ಎಲ್ಲರಿಗೆ ಒಂದು ಟೈಂ ಬಾಂಡ್ ಕೊಟ್ಟಿದ್ದೇನಿ. ನೀರನ್ನು ಪಂಪ್ ಮಾಡಲು ಅಧಿಕಾರಿಗಳಿಗೂ ಜವಾಬ್ದಾರಿ ನೀಡಿದ್ದೇನೆ. ವಿಜಯ ದಶಮಿ ದಿನ ನೀರು ಹರಿಸುತ್ತೇವೆ ಎಂದಿದ್ದಾರೆ. ಆದ್ರೆ ಅವರ ಮಾತಿನಲ್ಲಿ ನನಗೆ ನಂಬಿಕೆಯಿಲ್ಲ. ಹಾಗಾಗಿ 100 ದಿನದಲ್ಲಿ ನೀರು ಹರಿಸುವಂತೆ ಸೂಚನೆ ನೀಡಿದ್ದೇನೆ. ರೈತರಿಗೆ ಉಳಿದಿರುವ ಪರಿಹಾರ ಹಣವನ್ನು ನೀಡಬೇಕು. ಪಟ್ಟಿ ತಯಾರು ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದಷ್ಟು ಬೇಗ ಎಲ್ಲರಿಗೂ ಪರಿಹಾರ ಕೊಡುವ ಕಾರ್ಯ ಮಾಡುತ್ತೇವೆ. ಜತೆಗೆ 100 ದಿನದಲ್ಲಿ ನೀರು ಹರಿಯಬಹುದು ಎಂದು ನನಗೆ ಭರವಸೆ ಇದೆ. ಗುತ್ತಿಗೆದಾರರು ನಾಳೆಯಿಂದಲೇ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರಿಗೂ ಟೈಂ ಲೈನ್ ಫಿಕ್ಸ್ ಮಾಡಿದ್ದೇವೆ ಎಂದರು.
ಇನ್ನು ಎಷ್ಟು ಹಣ ಬೇಕಾಗಬಹುದು ಮತ್ತು ಎಷ್ಟು ವರ್ಷಗಳಲ್ಲಿ ಕಾಮಗಾರಿ ಮುಗಿಯಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನಾನು, ಸರ್ಕಾರ ಸೂಚನೆ ನೀಡಬಹುದು. ನೀರು ಹರಿದ ಬಳಿಕ ಎಷ್ಟು ಹಣ ಖರ್ಚಾಯಿತು? ಮತ್ತು ಶೇ.ಎಷ್ಟು ಕಾಮಗಾರಿ ನಡೆದಿದೆ ಎಂದು ಗೊತ್ತಾಗುತ್ತದೆ. ಅಂದಾಜಿನಲ್ಲಿ ಏನು ಹೇಳುವುದಕ್ಕೆ ಆಗುವುದಿಲ್ಲ. ಎಲ್ಲವನ್ನು ನ್ಯಾಯಾಲಯಕ್ಕೆ ದಾಖಲೆ ಕೊಡುತ್ತೇನೆ ಎಂದರು.
ಹೆಚ್ಡಿಕೆಗೆ ಟಾಂಗ್: ಬಿಬಿಎಂಪಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಕೆಲಸ ಮಾಡಿರುವ ಎಲ್ಲರಿಗೂ ಹಣ ಕೊಡುತ್ತೇವೆ. ಈಗಾಗಲೇ ನಾನು ಹೇಳಿದ್ದೇನೆ. ಮತ್ತೆ ಅದೇ ಪ್ರಶ್ನೆ ಬೇಡ ಎಂದರು. ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಯಾರ‍್ಯಾರು ಕೆಲಸ ಮಾಡಿದ್ದಾರೆ ಅವರೆಲ್ಲರಿಗೂ ಹಣ ನೀಡುತ್ತಿದ್ದೇವೆ ಎಂದರು.
ಇನ್ನು ಕಾವೇರಿ ನೀರಿಗಾಗಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಪಾಪ ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ಮಾಡುವವರನ್ನು ನಿಲ್ಲಿಸಲು ಆಗುತ್ತಾ?. ಅವರ ಅಸ್ತಿತ್ವವನ್ನು ತೋರಿಸಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ. ತಮಿಳುನಾಡಿನವರು ಏಕೆ ಸುಪ್ರೀಂಕೋರ್ಟ್ ಹೋಗಿದ್ದಾರೆ?. ಅವರಿಗೆ ಸಮಸ್ಯೆಯಾಗಿದೆ ಅಂತ ಹೋಗಿದ್ದಾರೆ. ನಾನು ಈಗಾಗಲೇ ರೈತರಿಗೆ ಹೇಳಿದ್ದೇನೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ನೀರು ಬಿಡಬೇಕು. ಅವರಿಗೆ ಸಮಸ್ಯೆ ಇದೆ. ಅದಕ್ಕಾಗಿ ನೀರು ಬಿಟ್ಟಿದ್ದೇವೆ. ಬುಧವಾರ ಸರ್ವ ಪಕ್ಷ ಸಭೆ ಕರೆದಿದ್ದೇವೆ. ಎಲ್ಲರೂ ಸಹಕಾರ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಪಕ್ಷದ ಶಾಸಕರನ್ನು ಬೆದರಿಸುತ್ತಿದ್ದಾರೆ ಎಂಬ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಪ ವಿಚಾರಕ್ಕೆ ತಿರುಗೇಟು ನೀಡಿದ ಡಿಸಿಎಂ "ನಾನು ಯಾರಿಗಾದರೂ ಹೆದರಿಸಿದ್ದರೆ ಅವರ ಹತ್ತಿರವೇ ದೂರು ಕೊಡಿಸಬಹುದು. ಯಾರಿಗೆ ಹೆದರಿಸಿದ್ದೇನೆ ಅವರು ದೂರು ನೀಡಲಿ" ಎಂದು ಸವಾಲೆಸೆದರು.
ಇದನ್ನೂ ಓದಿ: ಎತ್ತಿನಹೊಳೆ ಕುಡಿವ ನೀರಿನ ಕಾಮಗಾರಿ ಸದ್ಯದಲ್ಲೇ ಪರಿಶೀಲನೆ ಮಾಡ್ತೇನಿ : ಡಿಸಿಎಂ ಡಿ ಕೆ ಶಿವಕುಮಾರ್