ಅರಸೀಕೆರೆ : ಮನೆಗೊಂದು ಮರ ಊರಿಗೊಂದು ವನ ಎಂಬ ನಾಣ್ಣುಡಿಯಂತೆ ನಾವೆಲ್ಲರೂ ಸೇರಿ ಒಟ್ಟಾಗಿ ಗಿಡಗಳನ್ನು ನೆಡುವ ಮೂಲಕ ಪೋಷಣೆ ಮಾಡಿದಾಗ ಇಂದಿನ ವಿಶ್ವ ಪರಿಸರ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಣಕಟ್ಟೆ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಪತ್ರಕರ್ತರ ಸಂಘದ ಅವರಣದಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಸಿರೇ ಉಸಿರು. ಇದರ ಆಧಾರದ ಮೇಲೆ ನಾವು ಪರಿಸರ ಕಾಪಾಡಬೇಕು. ಇಂದು ಪರಿಸರವನ್ನ ಕಾಪಾಡಿದಿದ್ರೆ ನಮ್ಮ ಮುಂದಿನ ಪೀಳಿಗೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದರು.
ಈಗಾಗಲೇ ನಗರದಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅಭಿವೃದ್ದಿಯ ಹೆಸರಲ್ಲಿ ಮರಗಳ ಮಾರಣ ಹೋಮವೇ ನಡೆಯುತ್ತಿದೆ. ಹೀಗಾಗಿ ಅಭಿವೃದ್ದಿಯ ಜೊತೆ ಜೊತೆಗೆ ಗಿಡಗಳನ್ನ ನೆಟ್ಟು ಪೋಷಣೆ ಮಾಡಬೇಕು. ಇಲ್ಲದಿದ್ದರೇ ಮುಂದಿನ ದಿನದಲ್ಲಿ ಮಾನವ ಕೃತಕ ಉಸಿರಾಟದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಟಿ ಆನಂದ್, ಪತ್ರಕರ್ತರ ಸಂಘದ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಇತರರು ಭಾಗಿಯಾಗಿದ್ದರು.