ಅರಕಲಗೂಡು(ಹಾಸನ): ದಿನವಿಡೀ ಚಟುವಟಿಕೆಯಿಂದಿರಲು, ದೇಹದಾರ್ಢ್ಯತೆ ಕಾಪಾಡಲು, ಆರೋಗ್ಯಕರ ಜೀವನ ನಡೆಸಲು ಹಾಗೂ ವಿಶೇಷವಾಗಿ ಮಾನಸಿಕ ಮತ್ತು ದೈಹಿಕವಾಗಿ ಚೈತನ್ಯಶೀಲರಾಗಿರಲು ಸೈಕ್ಲಿಂಗ್ ಉತ್ತಮ ವ್ಯಾಯಾಮವಾಗಿದೆ ಎಂದು ಕೊಣನೂರು ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಎಸ್. ಎಲ್. ಸಾಗರ್ ಹೇಳಿದರು.
ಕೊಣನೂರು ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಸೈಕಲ್ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಸಾಗರ್, ದೈಹಿಕ ಶ್ರಮವನ್ನು ಆಧರಿಸಿ ಚಲಿಸುವ ಅತಿ ಸರಳ ವಾಹನವಾದ ಬೈಸಿಕಲ್ ಜನಸಾಮಾನ್ಯರ ವಾಹನವಾಗಿದೆ. ಇಂದು ಸೈಕ್ಲಿಂಗ್ ನಿತ್ಯದ ಚಲನೆಯ ಅಗತ್ಯತೆಗಿಂತಲೂ ವ್ಯಾಯಾಮದ ಅವಶ್ಯಕತೆಗಾಗಿಯೇ ಹೆಚ್ಚು ಬಳಸಲ್ಪಡುತ್ತಿದೆ ಎಂದರು.
ವಾಕಿಂಗ್ ಮತ್ತು ಸೈಕ್ಲಿಂಗ್ ಜನರಿಗೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಹೃದ್ರೋಗ, ಸ್ಟ್ರೋಕ್ ಮೊದಲಾದ ಹಲವು ಕಾಯಿಲೆಗಳ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುವುದಲ್ಲದೇ ಸಂಚಾರಿ ಸಾಧನವಾಗಿ ಸಹಕಾರಿಯಾಗಿದೆ. ಆರೋಗ್ಯಕರ ಜೀವನಶೈಲಿ ಅಳವಡಿಕೆಗೆ ಪ್ರೇರೇಪಣೆ ನೀಡಲು ಸಹ ಈ ದಿನವನ್ನುಆಚರಿಸಲಾಗುತ್ತದೆ. ಪ್ರತೀ ದಿನ ಸೈಕಲ್ ಸವಾರಿ ಮಾಡುವ ಹವ್ಯಾಸ ಬೆಳೆಸಿಕೊಳ್ಳುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎ.ಎಸ್.ಐ ಪ್ರಹ್ಲಾದ್ ಮತ್ತು ಇಲಾಖೆಯ ಸಿಬ್ಬಂದಿ, ಯುವ ಮುಖಂಡ ಸಂತೋಷ್, ಯುವಕರು ಮೊದಲಾದವರು ಉಪಸ್ಥಿತರಿದ್ದರು.