ಹಾಸನ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ತಾಲೂಕು ತೇಜೂರು ಗ್ರಾಮದ ಮಹಿಳಾ ಸ್ವಸಹಾಯ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರಿಗೆ ಮನವಿ ಸಲ್ಲಿಸಿದರು.
ತೇಜೂರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಸಾಕಷ್ಟು ಕುಟುಂಬಗಳು ಹಾಳಾಗಿವೆ. ಗ್ರಾಮದ ಪುರುಷರು ನಿತ್ಯ ಕೂಲಿ ಕೆಲಸ ಮಾಡಿ ಬಂದ ಹಣದಿಂದ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ. ಮನೆಯ ಹೆಂಗಸರ ಜೊತೆಗೆ ಜಗಳ, ಹಲ್ಲೆ ಮಾಡುವುದು, ನಿಂದಿಸುವುದು ಮಾಡುತ್ತಿದ್ದಾರೆ. ಇದರಿಂದ ಹೆಣ್ಣು ಮಕ್ಕಳು ನಿತ್ಯ ಮಾನಸಿಕ ಮತ್ತು ದೈಹಿಕ ಕಿರುಕುಳ ಅನುಭವಿಸುವಂತಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.
ಮನೆಗಳಲ್ಲಿ ಓದುವ ಮಕ್ಕಳಿದ್ದು, ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಅಲ್ಲದೇ ದುಡಿದ ಹಣವನ್ನೆಲ್ಲ ಮದ್ಯ ಸೇವನೆಗೆ ಬಳಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ತೇಜೂರು ಶ್ರೀ ರಂಗನಾಥಸ್ವಾಮಿ ಸ್ವ ಸಹಾಯ ಸಂಘದ ಪದಾಧಿಕಾರಿಗಳು ಹಾಗೂ ತೇಜೂರು ಗ್ರಾಮದ ಲತಾ, ಜಯಮ್ಮ, ಮಂಜುಳ, ಗೀತಾ, ಪುಷ್ಪ, ಚೈತ್ರಾ , ಮಂಜುಳ, ಲತಾ, ಸುನಿತಾ ಹಾಗೂ ಇತರರು ಪ್ರತಿಭಟನೆಯಲ್ಲಿ ಹಾಜರಿದ್ದರು.