ಸಕಲೇಶಪುರ/ಹಾಸನ: ಕ್ಷುಲ್ಲಕ ಕಾರಣಕ್ಕೆ ನವವಿವಾಹಿತೆಯೊಬ್ಬಳು ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಬೆಕ್ಕ ಗ್ರಾಮದ ಪೂಜಾ (20) ಮೃತ ದುರ್ದೈವಿ. ಗ್ರಾಮದ ಕೆಂಪೇಗೌಡ ಹಾಗೂ ಜಯಮ್ಮ ಎಂಬುವರ ಪುತ್ರಿ ಪೂಜಾ, ತಾಲೂಕಿನ ರಾಮೇನಹಳ್ಳಿಯ ಅಶ್ವಥ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಸುಮಾರು 9 ತಿಂಗಳ ಹಿಂದೆ ಯುವತಿಯ ಮನೆಗೆ ಬಂದ ಅಶ್ವತ್ಥ ನಾನು ಮತ್ತು ಪೂಜಾ ಪ್ರೀತಿಸುತ್ತಿದ್ದೇವೆ ಎಂದು ಬೇರೆ ಹುಡುಗನ ಜೊತೆ ಆಗಿದ್ದ ನಿಶ್ಚಿತಾರ್ಥ ರದ್ದು ಮಾಡಿಸಿ ಮದುವೆ ಆಗಿದ್ದ. ಮದುವೆಯಾದ ನಂತರ ಗಂಡ ಹೆಂಡತಿ ಅನೋನ್ಯವಾಗಿಯೇ ಇದ್ದರು. ಆದರೆ, ಕಳೆದ ಒಂದು ತಿಂಗಳ ಹಿಂದೆ ಪತಿ, ಪತ್ನಿ ನಡುವೆ ಕೆಲವೊಂದು ವಿಚಾರಕ್ಕೆ ಮನಸ್ತಾಪ ಬಂದಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜೀ ಪಂಚಾಯಿತಿ ಮಾಡಲು ಯುವತಿಯ ಕುಟುಂಬದವರು ಇಂದು ರಾಮೇನಹಳ್ಳಿ ಗ್ರಾಮದಲ್ಲಿರುವ ಯುವಕನ ಮನೆಗೆ ಬಂದಿದ್ದರು.
ಈ ವೇಳೆ, ಹುಡುಗಿಯ ಮನೆಯವರು ಹಲ್ಲೆ ಮಾಡುತ್ತಾರೆ ಎಂದು ಹೆದರಿ ಆಶ್ವತ್ಥ ಮನೆಯಿಂದ ಹೊರ ಹೋಗಿದ್ದ. ಪೂಜಾ ಹಲವು ಬಾರಿ ಅಶ್ವತ್ಥಗೆ ದೂರವಾಣಿ ಮುಖಾಂತರ ಕರೆ ಮಾಡಿದರು ಸಹ ಆತ ಸಂಧಾನಕ್ಕೆ ಬರಲು ಒಪ್ಪದ ಕಾರಣ ಅಂತಿಮವಾಗಿ ಇದು ನನ್ನ ಕೊನೆಯ ಸಂದೇಶ ಎಂದು ಮೆಸೇಜ್ ಕಳುಹಿಸಿ ಪಟ್ಟಣದ ಹೇಮಾವತಿ ನದಿಗೆ ನಿರ್ಮಿಸಲಾಗಿರುವ ಹಳೇ ಸೇತುವೆ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವರದಕ್ಷಿಣೆ ಕಿರುಕುಳ ಆರೋಪ:
ಈ ವೇಳೆ ಅಶ್ವತ್ಥ ಸ್ನೇಹಿತನೋರ್ವ ಈಕೆಯನ್ನು ಹಿಂಬಾಲಿಸಿಕೊಂಡು ಬಂದು ಆಕೆಯನ್ನು ಕಾಪಾಡಲು ಯತ್ನಿಸಿದ್ರು. ಆದರೂ ಆಕೆ ಮೊಬೈಲ್ ಎಸೆದು ಹೇಮಾವತಿ ನದಿಗೆ ಹಾರಿದ್ದಾಳೆ. ಯುವತಿಯ ಸಂಬಂಧಿಕರು ಯುವಕನ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಬಾಳಿ ಬದುಕಬೇಕಾಗಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿರುವುದು ದುರಂತವೇ ಸರಿ. ಸಕಲೇಶಪುರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹದ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಯುವತಿಯ ಕುಟುಂಬದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.