ಹಾಸನ: ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಆತನ ಮನೆಯನ್ನು ಸೀಲ್ಡೌನ್ ಮಾಡಲು ಹೋದ ಅಧಿಕಾರಿಗಳೊಂದಿಗೆ ಆ ಮನೆಯ ಮಹಿಳೆ ರಂಪಾಟ ಮಾಡಿದ ಘಟನೆ ಆಲೂರಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಮಹಿಳೆಯ ಮನೆಯಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಮನೆಯನ್ನು ಸೀಲ್ ಡೌನ್ ಮಾಡಲು ಆಲೂರು ತಹಶೀಲ್ದಾರ್ ಶಿರಿನ್ ತಾಜ್ ಮತ್ತು ಆರೋಗ್ಯಾಧಿಕಾರಿ ಮತ್ತು ಪೊಲೀಸರು ತೆರಳಿದ್ದರು. ಈ ವೇಳೆ ನನ್ನ ಮಗನನ್ನು ಆಸ್ಪತ್ರೆಗೆ ಕಳುಹಿಸುವುದಿಲ್ಲ. ಆರೋಗ್ಯದ ಸಮಸ್ಯೆ ಇದ್ದ ಕಾರಣ ನಾವೇ ಸ್ವಯಂ ಪ್ರೇರಿತರಾಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದೇವೆ. ನಮಗೆ ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ, ನಮ್ಮ ವೈರಿಗಳ ಮಾತು ಕೇಳಿ ನಮ್ಮ ಮನೆಗೆ ಬಂದಿದ್ದೀರಲ್ಲ, ಏನ್ ಮಾಡ್ತೀರೋ ಮಾಡಿ ಎಂದು ಮಹಿಳೆ ಗಲಾಟೆ ಮಾಡಿದ್ದಾಳೆ.
ನನಗೆ ಮಕ್ಕಳಿಲ್ವಾ, ಗಂಡ ಇಲ್ವಾ, ನನ್ನ ಮಗನನ್ನು ಗುಣಪಡಿಸುವುದು ನನಗೆ ಗೊತ್ತಿದೆ. ನಿಮಗೆ ಒಳ್ಳೆ ಮಾತಲ್ಲಿ ಹೇಳುತ್ತಿದ್ದೇನೆ. ಮತ್ತೆ ನಮ್ಮ ಮನೆ ಬಳಿ ಬರಬೇಡಿ ಎಂದು ಅಧಿಕಾರಿಗಳನ್ನು ಕಂಗಾಲಾಗಿಸಿದ್ದಾಳೆ. ಅಧಿಕಾರಿಗಳು ಎಷ್ಟೇ ಮನವರಿಕೆ ಮಾಡಲು ಪ್ರಯತ್ನಿಸಿದರೂ, ಮಹಿಳೆ ಮಾತ್ರ ಮಾತು ಕೇಳಲು ತಯಾರಿರಲಿಲ್ಲ. ಕೊನೆಗೆ ಆರೋಗ್ಯಾಧಿಕಾರಿ ಸೋಂಕಿತನನ್ನು ಹೋಂ ಐಸೊಲೇಷನ್ ಮಾಡಿ. ಮನೆಯನ್ನು ಸೀಲ್ ಡೌನ್ ಮಾಡಿದ್ದಾರೆ.
ರಂಪಾಟ ಮುಗಿದ ಬಳಿಕ ತನ್ನ ತಪ್ಪಿನ ಅರಿವಾದಾಗ, ಇನ್ನು ಮುಂದೆ ಈ ರೀತಿ ಗಲಾಟೆ ಮಾಡುವುದಿಲ್ಲ ಎಂದು ಮಹಿಳೆ ಮುಚ್ಚಳಿಕೆ ಬರೆದುಕೊಟ್ಟಿದ್ದಾಳೆ. ಮುಚ್ಚಳಿಕೆ ಬರೆಸಿಕೊಂಡ ಅಧಿಕಾರಿಗಳು ಮಾನವೀಯತೆ ದೃಷ್ಠಿಯಿಂದ ದೂರು ದಾಖಲಿಸದೆ ಸ್ಥಳದಿಂದ ವಾಪಸ್ ಬಂದಿದ್ದಾರೆ.