ಹಾಸನ: ರಾಜಕಾರಣವೇ ಹಾಗೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇತರ ಪಕ್ಷದವರೊಂದಿಗೆ ಯಾವಾಗ ಜಗಳ ಆಡ್ತಾರೆ, ಯಾವಾಗ ಒಂದಾಗ್ತಾರೆ ಅನ್ನೋದನ್ನ ಕಂಡುಹಿಡಿಯೋದು ಬಹಳ ಕಷ್ಟ. ಹಾಸನದಲ್ಲಿ ಕೂಡ ಅದೇ ರೀತಿಯ ಘಟನೆಯೊಂದು ಜರುಗಿತ್ತು.
ಅದೇನು ಅಂತಿರಾ ಈ ಸ್ಟೋರಿ ಓದಿ.
ದೇವೇಗೌಡ್ರ ವಿಕೆಟ್ ಬಿದ್ದು ಹೋಗುತ್ತೆ, ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವೇ ರಾಜ್ಯದಲ್ಲಿ ಆಡಳಿತ ನಡೆಸುತ್ತದೆ ಅಂತ ಹಾಸನ ಶಾಸಕ ಪ್ರೀತಂಗೌಡನ ಲಘುವಾದ ಹೇಳಿಕೆಗೆ ಜೆಡಿಎಸ್ ಕಾರ್ಯಕರ್ತರು ಪ್ರೀತಂ ಮನೆ ಮುಂದೆ ದಾಂಧಲೆ ನಡೆಸಿ ಕಲ್ಲು ತೂರಾಟ ಮಾಡಿದರು.
ಶಾಸಕ ಪ್ರೀತಂಗೌಡ ಮಾತಾಡಿದ್ದು ಒಂದು ರೀತಿಯ ತಪ್ಪು. ರಾಜಕೀಯ ದ್ವೇಷಕ್ಕೆ ವ್ಯಕ್ತಿಗಳ ಸಾವನ್ನು ಬಯಸುವುದು ಮಾತ್ರ ನಿಜಕ್ಕೂ ಅಪರಾಧ. ಪ್ರೀತಂಗೌಡ ಮನೆಯ ಮೇಲಿನ ದಾಳಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ರಾಜ್ಯ ನಾಯಕರು ಸೇರಿ ರಾಜ್ಯಪಾಲರಿಗೆ ದೂರು ಕೂಡಾ ಸಲ್ಲಿಸಿದರು.
ಇದರ ಬೆನ್ನಲ್ಲೇ ಕಾಂಗ್ರೆಸ್ನ ಮಾಜಿ ಸಚಿವ ಎ.ಮಂಜು ಪ್ರೀತಂಗೌಡ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ರು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎ.ಮಂಜುಗೆ ಟಿಕೆಟ್ ಕೈತಪ್ಪಿ ಹೋದರೆ ಬಿಜೆಪಿಗೆ ಹೋಗ್ತಾರೆ ಎಂದು ರಾಜಕೀಯ ವಲಯದಲ್ಲಿ ಪಿಸು ಮಾತುಗಳಿದ್ದವು. ನಂತರ ಎ.ಮಂಜು ಬಿಜೆಪಿ ಶಾಸಕ ಪ್ರೀತಂಗೌಡ ಮನೆಗೆ ಹೋಗಿ ಕಲ್ಲು ತೂರಾಟ ಸಂಬಂಧ ಸಾಂತ್ವನ ಹೇಳಿರುವ ರೀತಿಯನ್ನು ನೋಡಿದರೆ ಆ ಮಾತುಗಳಿಗೆ ಮತ್ತಷ್ಟು ಪುಷ್ಠಿ ಕೊಟ್ಟಂತಾಗಿದೆ.
ಇನ್ನು ಈ ಸಂಬಂಧ ಜಿಲ್ಲೆಯ ಅರಸೀಕೆರೆಯಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ ಮಾಜಿ ಸಚಿವ ಎ.ಮಂಜು, ಪ್ರೀತಂಗೌಡ ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ಜೆಡಿಎಸ್ ಕಾರ್ಯಕರ್ತರು ಏಕಾಏಕಿ ಶಾಸಕನ ಮನೆ ಮೇಲೆ ಹಲ್ಲೆ ಮಾಡಿರುವುದು ನಿಜಕ್ಕೂ ಖಂಡನೀಯ. ಹೀಗಾಗಿ ಒಬ್ಬ ಸ್ನೇಹಿತನಾಗಿ ಅವರ ಮನೆಗೆ ಹೋಗಿ ಸಾಂತ್ವನ ಹೇಳಿದೆ. ನನ್ನ ಹಾಗೆ ಆತ್ಮಸಾಕ್ಷಿ ಎನ್ನುವುದು ದೇವೇಗೌಡರಿಗೇನಾದರೂ ಇದ್ದರೆ ಅವರು ಅವರ ಮನೆಗೆ ತೆರಳಿ ಸಾಂತ್ವನ ಹೇಳಲಿ ಅಂತ ಸಲಹೆ ನೀಡಿದ್ರು.
ಇದೇ ವೇಳೆ ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದರೆ ನನ್ನ ಬೆಂಬಲ ಇಲ್ಲ. ದೇವೇಗೌಡ್ರು ಮಾಡಿದ್ರೆ ಮಾತ್ರ ನನ್ನ ಬೆಂಬಲ ಇದೆ ಎನ್ನುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಎ.ಮಂಜು ಚಾಟಿ ಬೀಸಿದರು. ಹಾಗೇನಾದ್ರೂ ಆದ್ರೆ ಮುಂದಿನ ನನ್ನ ನಡೆ ಬೇರೆಯದಾಗಿರುತ್ತದೆ ಸದ್ಯ ಸಮಿಶ್ರ ಸರ್ಕಾರ ಬಿದ್ದು ಹೋಗುತ್ತೆ ಅಥವಾ ಮುಂದುವರಿಯುತ್ತಾ ಅನ್ನೋದನ್ನ ನಾನು ಪ್ರಸ್ತಾಪಿಸಲು ಹೋಗಲ್ಲ. ಪ್ರಜ್ವಲ್ ಸ್ಪರ್ಧೆ ಮಾಡಿದ್ರೆ ಮಾತ್ರ ನನ್ನ ಬೆಂಬಲ ಇಲ್ಲ ಅಂತ ಪುನರುಚ್ಚರಿಸಿದರು.