ಹಾಸನ: ಕೊರೊನಾ ಮಹಾಮಾರಿ ಭಯ ಮೂಡಿಸಿ ರೈತನ ಬಾಯಿಗೆ ಬಟ್ಟೆ ಕಟ್ಟಿಸುವಂತಹ ಕಾನೂನು ಈ ರಾಜ್ಯಕ್ಕೆ ಅವಶ್ಯಕತೆ ಇದೆಯಾ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ ಮಾಡಿದ್ದಾರೆ.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತಾಶ್ರಯದಲ್ಲಿ ಕೋವಿಡ್-19, ಎಪಿಎಂಸಿಯ ಕಾಯ್ದೆ ತಿದ್ದುಪಡಿ ಕುರಿತು ಮುಂಜಾಗೃತಾ ಕ್ರಮಗಳ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಇಲ್ಲದಿರುವುದು ಒಂದು ಸಮಸ್ಯೆಯಾದರೆ, ಹಳ್ಳಿಗಳಲ್ಲಿರುವ ರೈತರ ಬದುಕು ದಿನೇ ದಿನೆ ಕ್ಷೀಣಿಸುತ್ತಿರುವಾಗ ಕೊರೊನಾ ಎಂಬ ದೊಡ್ಡ ರೋಗಾಣು ಇಡೀ ಪ್ರಪಂಚಕ್ಕೆ ಹರಡಿ ನಮ್ಮ ದೇಶಕ್ಕೆ ವ್ಯಾಪಿಸಿದೆ ಎಂದರು.
ದೇಶದ ಪ್ರಧಾನಿ ಮನ್ ಕಿ ಬಾತ್ನಲ್ಲಿ ರೈತರ ಕಷ್ಟದ ಬಗ್ಗೆ ಮಾತನಾಡಲ್ಲ. ಸಾಯುತ್ತಿರುವ ರೈತರ ಬಗ್ಗೆ ಮಾತನಾಡುತ್ತಿಲ್ಲ. ಪಾಕಿಸ್ತಾನ, ಚೀನಾ, ಭಾರತದೊಳಗೆ ಕೊರೊನಾ ಇರುವ ಬಗ್ಗೆ ಮಾತನಾಡುತ್ತಾರೆ. ಇದನ್ನು ಬಿಟ್ಟು ಬೇರೆ ಮಾತನಾಡುವುದಿಲ್ಲ ಎಂದು ಕಿಡಿಕಾರಿದರು.
ಇನ್ಮುಂದೆ ಪ್ರತಿ ಭಾನುವಾರ ಕರ್ನಾಟಕ ಲಾಕ್ಡೌನ್ ಆದೇಶವಾಗಿದೆ. ರೈತರಲ್ಲಿ ಭಯ ಮೂಡಿಸಿದೆ. ರೈತನ ಬಾಯಿಗೆ ಬಟ್ಟೆ ಕಟ್ಟಿಸಿ ತರುವಂತಹ ಕಾನೂನು ಈ ರಾಜ್ಯಕ್ಕೆ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದರು. ಭೂ ಸ್ವಾಧೀನ ಕಾಯ್ದೆ 2019ರಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಯಿತು. ಎಪಿಎಂಸಿ ಕಾಯ್ದೆಯನ್ನು ರಾಜ್ಯ ಸರ್ಕಾರ ಬಹಳ ತರಾತುರಿಯಲ್ಲಿ ಜಾರಿಗೊಳಿಸಿದೆ. ಇದರ ಅವಶ್ಯಕತೆ ಏನಿತ್ತು?
ಭೂ ಸ್ವಾಧೀನ, ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ಎಲ್ಲವನ್ನು ಕಠಿಣವಾಗಿ ಜಾರಿಗೆ ತರುವುದಕ್ಕೆ ಹಾಗೂ ಗುತ್ತಿಗೆ ಕರಾರು-2016 ಈ ಪ್ರಸ್ತಾಪವನ್ನು ತ್ವರಿತವಾಗಿ ಜಾರಿ ತರುವುದಕ್ಕೆ ಕೇಂದ್ರ ಸರ್ಕಾರ, ತೀರ್ಮಾನ ಕೈಗೊಳ್ಳಲು ನಿರ್ದೇಶನ ನೀಡಿದೆ ಎಂದು ಹೇಳಿದರು. ಯಾವುದೇ ಕಾನೂನು ಜಾರಿಗೆ ಬಂದರೆ ಅದು ರೈತರಿಗೆ ಅನುಕೂಲವಾಗಿರಬೇಕು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.