ಹಾಸನ/ಅರಸೀಕೆರೆ : ಯಾವುದೇ ಜಾತಿ ಮತ, ರಾಜಕೀಯ ಬೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದು ಶೈಕ್ಷಣಿಕ ಕ್ಷೇತ್ರ ಮಾತ್ರ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮಲು ಅಭಿಪ್ರಾಯಪಟ್ಟರು.
ತಾಲೂಕಿನ ಕಣಕಟ್ಟೆ ಹೋಬಳಿ ರಾಮನಹಳ್ಳಿ ಸಮೀಪ ನಿರ್ಮಾಣ ಮಾಡಲಾಗಿರುವ ಇಂದಿರಾಗಾಂಧಿ ವಸತಿ ಶಾಲೆ ಸಮುಚ್ಚಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳ ಮನಸ್ಸಿನಲ್ಲಿ ಯಾವುದೇ ಬೇಧಭಾವ ಇರುವುದಿಲ್ಲ.
ಹಾಗೆಯೇ ಅವರಿಗೆ ಶಿಕ್ಷಣ ಕೊಡುವಲ್ಲಿ ಕೂಡ ಶಿಕ್ಷಕರು ಬೇಧ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಶೈಕ್ಷಣಿಕವಾಗಿ ಎಲ್ಲಾ ಸಮಾಜ ಮುಂದುವರೆದಾಗ ಮಾತ್ರ ದೇಶದ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.
ಅಂಬೇಡ್ಕರ್ ಮತ್ತು ಬಸವಣ್ಣನವರಿಂದ ಸಮಾಜ ಇಂದು ಶಾಂತಿಯುತವಾಗಿ ನಡೆಯುತ್ತಿದೆ. ಸರ್ಕಾರ ಇರಬಹುದು ಹೋಗಬಹುದು. ಆದ್ರೇ, ಯಾವುದೇ ಸರ್ಕಾರ ಬಂದರು ಶಿಕ್ಷಣಕ್ಕೆ ಒತ್ತು ನೀಡಬೇಕು. ಆಗ ಮಾತ್ರ ಮಕ್ಕಳ ಭವಿಷ್ಯ ಸುಂದರವಾಗಿ ರೂಪುಗೊಳ್ಳುತ್ತದೆ. ನನ್ನ ಇಲಾಖೆಗೆ ಏಕಲವ್ಯ ಶಾಲೆ ಬರುವುದಿಲ್ಲ. ಆದರೆ, ಅಗತ್ಯವಿದ್ದರೆ ನಾನು ಕೇಂದ್ರದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅರಸೀಕೆರೆಗೆ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇನ್ನು, ರಾಜ್ಯದ ಕೆಲವು ವಸತಿ ಶಾಲೆಗಳಲ್ಲಿ ಮೂಲಸೌಕರ್ಯ ನೀಡುವ ಕಾರ್ಯ ಮಾಡುತ್ತೇನೆ. ರಾಜಕೀಯದಲ್ಲಿ ಕಚ್ಚಾಟವಿರಬಹುದು. ಆದ್ರೇ, ಮಕ್ಕಳ ವಿಷಯಕ್ಕೆ ಬಂದಾಗ ನಾವೆಲ್ಲ ಒಂದು ಎಂಬ ಭಾವನೆಯಲ್ಲಿರಬೇಕು. ವಸತಿ ಶಾಲೆಗಳಿಗೆ ಸಂಬಂಧಿಸಿದ ಯಾವುದೇ ಕುಂದುಕೊರತೆಗಳು, ಅಗತ್ಯ ವಸ್ತುಗಳು ಏನೇ ಇದ್ದರೂ ಪಕ್ಷಬೇಧ ಮರೆತು ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ನಾನು ಬೇಡಿಕೆ ಪೂರೈಸುತ್ತೇನೆ ಎಂದರು.