ಹಾಸನ: ''ರಾಜಕಾರಣದಲ್ಲಿ ಸಂಯಮ ಇರಬೇಕು. ಇಲ್ಲಿ ಯಾರೂ ಸತ್ಯ ಹರಿಶ್ಚಂದ್ರರು ಇಲ್ಲ. ಹಾಗಾಗಿ ಸುಮ್ಮನೇ ಏನೇನೋ ಮಾತನಾಡಬಾರದು. ಆಣೆ ಪ್ರಮಾಣ ಮಾಡೋರು ಮಾಡಲಿ, ನಮ್ಮದೇನೂ ಅಡ್ಡಿ ಇಲ್ಲ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ತಿರುಗೇಟು ಕೊಟ್ಟಿದ್ದಾರೆ.
ನಗರದಲ್ಲಿ ಇಂದು (ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಚಿವರು, ಶಾಸಕರಿಗೆ ಡಿ.ಕೆ.ಶಿವಕುಮಾರ್ ಜೊತೆ ಹೊಂದಾಣಿಕೆ ಆಗ್ತಿಲ್ಲ ಎಂಬ ಬಿಜೆಪಿ ಟೀಕೆಯ ವಿಚಾರವಾಗಿ ಪ್ರತಿಕ್ರಿಯಿಸಿ, ''ಸರ್ಕಾರ ಬಂದು 5 ತಿಂಗಳಾದ್ರೂ, ವಿಪಕ್ಷ ನಾಯಕನ ಆಯ್ಕೆ ಮಾಡೋಕ್ಕಾಗಿಲ್ಲ. ಬಿಜೆಪಿಯಲ್ಲಿ ಹೊಂದಾಣಿಕೆಯಿಲ್ಲ ಎಂಬುದು ಗೊತ್ತಲ್ಲಾ. ಅದನ್ನು ಬಿಟ್ಟು ನೀವು ಇಲ್ಲಿ ಅಸಮಾಧಾನ ಇದೆ ಅಂತೀರಾ. ರಾಜ್ಯ ವಿಧಾನಸಭೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಓರ್ವ ವಿಪಕ್ಷ ನಾಯಕ ಇಲ್ಲದೇ ಸದನ ನಡೆದು ಹೋಯ್ತು. ಬಜೆಟ್ ಅಧಿವೇಶನದಲ್ಲಿಯೂ ವಿಪಕ್ಷ ನಾಯಕರೇ ಇರಲಿಲ್ಲ. ಈ ರೀತಿ ಪರಿಸ್ಥಿತಿ ರಾಜ್ಯದಲ್ಲಿ ಆಗಿರುವುದಕ್ಕೆ ಬಿಜೆಪಿ ಕಾರಣ. ಇದನ್ನು ಪ್ರಶ್ನೆ ಮಾಡಬೇಕು'' ಎಂದರು.
''ಆಣೆ ಪ್ರಮಾಣ ಮಾಡೋರು ಮಾಡಲಿ ನಮ್ಮದು ಅಡ್ಡಿ ಇಲ್ಲ. ನಮ್ಮ ಎಲೆಯಲ್ಲಿ ನೊಣ ಸತ್ತು ಬಿದ್ದಿದೆ. ಅವರ ಎಲೆಯಲ್ಲಿ ಹೆಗ್ಗಣ ಬಿದ್ದಿದೆ. ಆದರೆ, ನಮ್ಮ ಕಡೆ ಕೈ ತೋರಿಸ್ತಾರೆ'' ಎಂದ ಅವರು, ''ಚುನಾವಣೆ ಕಳೆದು ಕೇವಲ 5 ತಿಂಗಳಾಗಿದೆ. ಮತ್ತೆ ಚುನಾವಣೆ ಎದುರಿಸುವುದಕ್ಕೆ ಯಾರೂ ಕೂಡ ಸಿದ್ಧ ಇಲ್ಲ. ಐದು ವರ್ಷ ನಮ್ಮ ಸರ್ಕಾರ ಇದ್ದೇ ಇರುತ್ತದೆ. ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿ ಆಗಿರಬೇಕು ಎಂಬುದು ಜನರ ಬಯಕೆ. ಇದನ್ನೆಲ್ಲ ನಾವು ಕೂಡ ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ, ಅದನ್ನು ಪಾಲಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
'ಕಾಂಗ್ರೆಸ್‌ನಲ್ಲಿ ಸಿಎಂ ಆಗುವ ಅರ್ಹತೆ ಇರುವ ಎರಡು ಡಜನ್ ನಾಯಕರಿದ್ದಾರೆ': ಡಿ.ಕೆ.ಶಿವಕುಮಾರ್ ಕೂಡ ಸಿಎಂ ಆಗಬೇಕು ಎನ್ನುವ ಕೆಲವು ಶಾಸಕರ ಅಭಿಪ್ರಾಯವಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ''ಕೆಲವರು ಹೇಳಿದರೆ ಅದರಲ್ಲಿ ತಪ್ಪೇನಿದೆ? ಮನುಷ್ಯರಿಗೆ ವಿಭಿನ್ನ ಅನಿಸಿಕೆ, ರುಚಿ ಇರುತ್ತದೆ. ಒಬ್ಬೊಬ್ಬರಿಗೆ ಒಂದೊಂದರಲ್ಲಿ ಆಸಕ್ತಿ, ಪ್ರೀತಿ ಇರುತ್ತೆ. ಕೆಲವಲ್ಲಿ ಕಮ್ಮಿ ಇರುತ್ತೆ. ಕೆಲವರು ಹೇಳಿರೋದ್ರಲ್ಲಿ ತಪ್ಪೇನಿಲ್ಲ. ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ. ಒಳ್ಳೆಯ ಸಂಘಟನೆ ಮಾಡಿ ಮೊದಲಿಂದಲೂ ನಿಷ್ಠಾವಂತರಾಗಿದ್ದಾರೆ. ಮುಖ್ಯಮಂತ್ರಿ ಆಗುವ ಅರ್ಹತೆ ಇರುವವರು ಕಾಂಗ್ರೆಸ್‌ನಲ್ಲಿ ಇನ್ನೂ ಎರಡು ಡಜನ್ ನಾಯಕರಿದ್ದಾರೆ. ಅವರು ಮುಖ್ಯಮಂತ್ರಿ ಆಗ್ತಾರೆ ಅನ್ನೋದಾದ್ರೆ ಸಂತೋಷಪಡುವುದರಲ್ಲಿ ನಾನು ಕೂಡಾ ಒಬ್ಬ'' ಎಂದು ತಿಳಿಸಿದರು.
ಸರ್ಕಾರದ ಪತನದ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿಕೆಗೆ ಉತ್ತರಿಸಿ, ''ಬಿಜೆಪಿಯ 25 ಶಾಸಕರು ಬರ್ತಾರೆ ಅಂತ ನಾನೂ ಹೇಳ್ತೀನಿ, ಹಾಗೆಂದು ಅವರು ಬರ್ತಾರಾ?. ಜೆಡಿಎಸ್ನ ಸ್ವರೂಪ್ ಕಾಂಗ್ರೆಸ್ಗೆ ಬರ್ತಾರೆ ಅಂತೀನಿ ಬರ್ತಾರಾ? ಇದೆಲ್ಲಾ ಆಗದೇ ಇರೋ ವಿಚಾರ. ಈಗ ಇದರ ಚರ್ಚೆ ಯಾಕೆ?'' ಎಂದರು. ಕೆಲ ಶಾಸಕರ ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರವಾಸದ ವಿಚಾರಕ್ಕೆ ಪ್ರತಿಕ್ರಿಯಿಸಿ, ''ಅವರು ಹೋಗಬಾರದು ಅಂತೇನಿದೆ? ಕೆಲವು ವಿಷಯಗಳ ಬಗ್ಗೆ ಬೆಳಗಾವಿ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಮನಸ್ತಾಪ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಸಮಸ್ಯೆ ಇದೆ ಎನ್ನುವುದು ಮಾಧ್ಯಮಗಳು ಸೃಷ್ಟಿ. ಕರ್ನಾಟಕದಲ್ಲಿ ಸರಿಯಾದ ವಿರೋಧ ಪಕ್ಷ ಎಂದರೆ ಅದು ಮಾಧ್ಯಮದವರೇ. ಬೆಳಗಾವಿಯಲ್ಲಿ ಏನೂ ಗೊಂದಲ ಇಲ್ಲ. ಇನ್ನೂ ಸರ್ಕಾರದ ಹನಿಮೂನ್ ಪಿರಿಯಡ್ ಮುಗಿದಿಲ್ಲ. ಸುಮ್ಮನೆ ಗೊಂದಲ ಮಾಡ್ತೀರಲ್ಲ'' ಎಂದು ಹೇಳಿದರು.
ಇದನ್ನೂ ಓದಿ: ಈಶ್ವರಪ್ಪಗೆ ಹೈಕಮಾಂಡ್ ಬುಲಾವ್: ಕೋಟ ಶ್ರೀನಿವಾಸ ಪೂಜಾರಿ, ಪಿ.ಸಿ.ಮೋಹನ್ ಜೊತೆ ಇಂದು ದೆಹಲಿಗೆ