ಹಾಸನ: ನೇಪಾಳದ ಕಠ್ಮಂಡುವಿನಲ್ಲಿ ಆಯೋಜನೆಗೊಂಡಿರುವ 13ನೇ ದಕ್ಷಿಣ ಏಷ್ಯಾ ರಾಷ್ಟ್ರಗಳ ಕ್ರೀಡಾಕೂಟದಲ್ಲಿ ಭಾರತ ಖೋ ಖೋ ತಂಡದಲ್ಲಿ ಹಾಸನದ ಹೊಯ್ಸಳ ನಗರದ ನಿವಾಸಿ ಶಿವಣ್ಣ ಎಂಬುವರ ಪುತ್ರ ಸುದರ್ಶನ್ ಭಾಗವಹಿಸಿ ಗೆಲುವಿಗೆ ಕಾರಣಕರ್ತರಾಗಿದ್ದಾರೆ. ಇವರ ಸಾಧನೆಯು ದೇಶಕ್ಕೆ, ರಾಜ್ಯಕ್ಕೆ ಹಾಗೂ ಹಾಸನ ಜಿಲ್ಲೆಗೆ ಗೌರವ ತಂದಂತಾಗಿದೆ.ಈ ಹಿನ್ನೆಲೆ ಹಾಸನಕ್ಕೆ ಆಗಮಿಸಿದ ಅವರನ್ನು, ಸ್ನೇಹಿತರು ಹಾಗೂ ಕ್ರೀಡಾಭಿಮಾನಿಗಳು ಶಾಲು, ಹಾರ ಹಾಗೂ ಪುಷ್ಪವನ್ನು ನೀಡಿ ಸ್ವಾಗತಿಸಿ ಬರಮಾಡಿಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಯುವ ಪ್ರತಿಭೆ ಸುದರ್ಶನ್, ನೇಪಾಳದ ಕಠ್ಮಂಡುನಲ್ಲಿ ನಡೆದ ಖೋ ಖೋ ಪಂದ್ಯಾವಳಿಯಲ್ಲಿ ಶ್ರೀಲಂಕ, ನೇಪಾಳ, ಬಾಂಗ್ಲಾದೇಶ ಹಾಗೂ ಭಾರತ ನಡುವೆ ಪಂದ್ಯಾವಳಿ ನಡೆದು, ಫೈನಲ್‌ನಲ್ಲಿ ಭಾರತ-ಬಾಂಗ್ಲಾದೇಶ ನಡುವೆ ಸ್ಪರ್ಧೆ ತೀವ್ರವಾಗಿ ಕೊನೆಯಲ್ಲಿ ಭಾರತ ಜಯಗಳಿಸಿತು ಎಂದರು.
ಈ ಗೆಲುವಿಗೆ ನಮ್ಮ ತಂದೆ- ತಾಯಿ ಪ್ರೋತ್ಸಾಹವೇ ಕಾರಣ. ಖೋ ಖೋ ಕ್ರೀಡೆಗೆ ಕರ್ನಾಟಕದಲ್ಲಿ ಯಾವುದೇ ಕೆಲಸ ಇಲ್ಲ, ಏನಾದರೂ ಕೆಲಸ ಸಿಗುವಂತಾದರೇ ಅನುಕೂಲವಾಗಿ ಈ ಕ್ರೀಡೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸರ್ಕಾರ ಇದರತ್ತ ಗಮನ ಹರಿಸಬೇಕು ಎಂದರು.