ಹಾಸನ: ಸಕಲೇಶಪುರ ಸುತ್ತಮುತ್ತ ಹಲವು ವರ್ಷಗಳಿಂದ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಹಿಂದಿನ ಸರ್ಕಾರ ವಿಫಲವಾಗಿದ್ದು, ಈ ಸಮಸ್ಯೆ ಬಗ್ಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ನಗರದಲ್ಲಿ ನಡೆದ ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಡಾನೆ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಫೆ.16 ರಂದು ಸಕಲೇಶಪುರ ಪಟ್ಟಣದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಆನೆ ಹಾವಳಿಗೆ ತುತ್ತಾದ ಬೆಳೆಗಾರರನ್ನು ಹಾಗೂ ಗ್ರಾಮಸ್ಥರನ್ನು ಆಹ್ವಾನಿಸಲಾಗಿದೆ. ಕಳೆದೆರಡು ತಿಂಗಳಲ್ಲಿ ಆನೆ ದಾಳಿಗೆ ಈಗಾಗಲೇ 5 ಜನರು ಸಾವನ್ನಪ್ಪಿದ್ದು, ಇಲ್ಲಿ ಅವರ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.
ಆನೆ ಕಾರಿಡಾರ್ ನಿರ್ಮಾಣ ಸಂಬಂಧ ಹಿಂದಿನ ಸರ್ಕಾರ ಕೈಗೊಂಡ ನಿರ್ಣಯ ಹಾಗೂ ಇತ್ತೀಚಿನ ದಿನಗಳಲ್ಲಿ ನಮ್ಮ ಸರ್ಕಾರ ಕೈಗೊಂಡ ಕೆಲಸಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಈಗಾಗಲೇ ಪುಂಡಾನೆ ಸೆರೆ ಸೇರಿದಂತೆ 3 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದ್ದು, ಕಾರಿಡಾರ್ ನಿರ್ಮಾಣಕ್ಕೆ ಸಭೆಯಲ್ಲಿ ಜನರಿಂದ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
2021ರ ಕೇಂದ್ರ ಬಜೆಟ್ ಐತಿಹಾಸಿಕ ಬಜೆಟ್ ಆಗಿದ್ದು, ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಲಾಗಿದೆ. ಪ್ರಮುಖವಾಗಿ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ, ಮೂಲಭೂತ ಸೌಕರ್ಯ, ಆರೋಗ್ಯ ಸೇರಿದಂತೆ ಇನ್ನಿತರೆ ವಲಯದಲ್ಲಿಯೂ ಕೂಡ ಹೆಚ್ಚು ಗಮನಹರಿಸಲಾಗಿದೆ ಎಂದು ಕೇಂದ್ರ ಬಜೆಟ್ಅನ್ನು ಸಮರ್ಥಿಸಿಕೊಂಡರು.
ಕೇಂದ್ರದ ಬಜೆಟ್ನಲ್ಲಿ ಕರ್ನಾಟಕಕ್ಕೆ ಸಾಕಷ್ಟು ಯೋಜನೆಗಳು ದೊರಕಿದ್ದು, ಅವುಗಳಲಿ 33 ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, 2ನೇ ಹಂತದ ಮೆಟ್ರೋ ಕಾಮಗಾರಿಗೆ ಹಣ ಬಿಡುಗಡೆ, ರೈಲ್ವೆ ಯೋಜನೆ, ಕೈಗಾರಿಕಾ ಕಾರಿಡಾರ್, ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹೆದ್ದಾರಿ ರಸ್ತೆ ಸುಧಾರಣೆ ಯೋಜನೆಯಾಗಿ ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ಹಾಗೂ ರಸ್ತೆ ಅಭಿವೃದ್ಧಿಗೆ ಅನುಮೋದನೆ ದೊರೆತಿದ್ದು ಕೇಂದ್ರ ಸಚಿವರಾದ ಸದಾನಂದಗೌಡ ಹಾಗೂ ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದ್ರು.
ಫೆ.28ರೊಳಗೆ ರಸ್ತೆ ದುರಸ್ತಿಗೆ ಸೂಚನೆ :
ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಮಾರ್ಗದ ಸಕಲೇಶಪುರ ಹೊರಗಿನ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಈ ನಡುವೆ ಸಂಚಾರ ಯೊಗ್ಯವಾಗಿ ಮಾಡಲು ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯಕ್ಕೆ ಈ ತಿಂಗಳು 28ರವರೆಗೆ ಕಾಲಾವಕಾಶ ನೀಡಲಾಗಿದೆ. 15 ದಿನಗಳ ಬಳಿಕ ಸ್ಥಳ ಪರಿಶೀಲನೆ ನಡೆಸಿ ಹೆದ್ದಾರಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಈ ವೇಳೆ ಶಾಸಕ ಪ್ರೀತಂ ಜೆ. ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಜಿಲ್ಲಾ ಉಸ್ತುವಾರಿ ನಿಜಗುಣರಾಜ್, ಮಾಜಿ ಶಾಸಕ ಬಿ.ಆರ್. ಗುರುದೇವ್, ಪ್ರಧಾನ ಕಾರ್ಯದರ್ಶಿ ವಿಜಯ್ ವಿಕ್ರಂ ಸೇರಿದಂತೆ ಇತರರು ಉಪಸ್ಥಿತರಿದ್ದರು.