ಹಾಸನ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಭೂ ಸುಧಾರಣೆ ಮತ್ತು ವಿದ್ಯುತ್ ಕಾಯ್ದೆಗಳಿಗೆ ನಮ್ಮ ಸಂಪೂರ್ಣ ವಿರೋಧವಿದೆ. ಆದರೆ ಆ ಕಾಯ್ದೆಗಳಲ್ಲಿ ಮಾರ್ಪಾಡು ಮಾಡಿದ್ದೇವೆ ಎಂದು ಬಿಜೆಪಿಯವರು ಹೇಳಿದ್ದರಿಂದ ನಾವು ಸುಧಾರಣೆಗೆ ಬೆಂಬಲ ಕೊಟ್ಟಿದ್ದೇವೆ. ಬೇರೆ ಯಾವುದಕ್ಕೂ ಅಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ರೈತರಿಗೆ ಮಾರಕವಾಗುವ 79 ಎ ಮತ್ತು ಬಿ ಕಲಂ ಅಡಿ ಮಾರ್ಪಾಡು ಮಾಡಿರುವ ಹಿನ್ನೆಲೆ ನಾವು ಮತ ಹಾಕುವ ಮೂಲಕ ಬೆಂಬಲ ಸೂಚಿಸಿದ್ದೇವೆ ಅಷ್ಟೇ. ಇದಕ್ಕೆ ಬೇರೆ ಯಾವುದೇ ಅರ್ಥ ಕಲ್ಪಿಸುವುದು ಬೇಡ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಈ ಕಾಯ್ದೆಗಳಿಂದ ಸಾಕಷ್ಟು ಅನುಕೂಲವಾಗುತ್ತದೆ. ಹಾಗಾಗಿ ಇಂತಹ ಕಾಯ್ದೆಗಳು ಬಂದಿರುವುದು. ಬಿಜೆಪಿ ಸರ್ಕಾರ ಲೂಟಿ ಮಾಡುವ ಸರ್ಕಾರ. ಅವರು ನೇರವಾಗಿ ಲೂಟಿ ಮಾಡುವುದಕ್ಕೆ ಆಗುವುದಿಲ್ಲ ಅಂತ ಅಧಿಕಾರಿಗಳಿಂದ ಹೀಗೆ ಮಾಡಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ರು.
ಇದನ್ನೂ ಓದಿ: ಕೋರಮಂಗಲ ಆರ್ಟಿಒ ಕಚೇರಿ ಮೇಲೆ ಎಸಿಬಿ ದಾಳಿ
ಇನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾವು ಯಾರೊಂದಿಗೂ ಕೂಡ ಹೊಂದಾಣಿಕೆ ಮಾಡಿಕೊಳ್ಳಲು ಹೋಗುವುದಿಲ್ಲ. ನಮ್ಮ ಬೆಂಬಲಿತ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ. ಬಿಜೆಪಿ ನಾಯಕರುಗಳಿಗೆ ಹಾಸನಕ್ಕೆ ಬಂದು ಮತ ಕೇಳುವ ಯಾವ ನೈತಿಕತೆಯೂ ಇಲ್ಲ. ಅವರಿಗೆ ಮಾನ ಮರ್ಯಾದೆ ಇದ್ದರೆ ಜಿಲ್ಲೆಗೆ ಬಂದು ಮತ ಕೇಳಬಾರದು ಎಂದರು. ಇದರ ಜೊತೆಗೆ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ವರ್ಗಾವಣೆ ದಂಧೆ ಮಾಡುವ ಮೂಲಕ 10ರಿಂದ 15ರಷ್ಟು ಕಮಿಷನ್ ಪಡೆಯುವ ಮೂಲಕ ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಹಿಂದೆ ನಾವು ಯಾರ ಮನೆ ಬಾಗಿಲಿಗೂ ಕೂಡ ಹೋಗಿಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿ ಯಾರಿಗೂ ಡಬಲ್ ಹಾಕಿ ಮಂತ್ರಿಗಿರಿ ಪಡೆದಿಲ್ಲ. ಅವರಾಗಿಯೇ ನಮ್ಮೊಂದಿಗೆ ಬಂದು ನಮಗೆ ಮೋಸ ಮಾಡಿದರು ಎಂದು ಮಾತಿನ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಗೆ ಮರುತ್ತರ ನೀಡಿದರು. ನಾನು ಸಿದ್ದರಾಮಯ್ಯ ಪರವಾಗಿಲ್ಲ. ಯಡಿಯೂರಪ್ಪ ಪರವಾಗಿಯೂ ಇಲ್ಲ. ನಾನು ರೈತರ ಪರವಾಗಿ ಇದ್ದೇನೆ. ಎರಡೂ ಪಕ್ಷಗಳು ಕಳೆದ ಹತ್ತು ವರ್ಷಗಳಲ್ಲಿ ಹಾಸನಕ್ಕೆ ಏನು ಕೊಡುಗೆ ಕೊಟ್ಟಿವೆ? ಕನಿಷ್ಠ ಹಾಸನ-ಸಕಲೇಶಪುರ ಗುಂಡ್ಯ ಮಾರ್ಗದ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ ಇವರಿಗೆ. ಇವರು ನಮ್ಮ ಪಕ್ಷದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದು ಹರಿಹಾಯ್ದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಎಷ್ಟು ಗೆಲುವು ಸಾಧಿಸುತ್ತಾರೆ ಎಂಬುದು ನಿಖರವಾಗಿ ಹೇಳಲು ಬರುವುದಿಲ್ಲ. ಕಾರಣ ಎರಡು ರಾಷ್ಟ್ರೀಯ ಪಕ್ಷಗಳು ಹಣ ಬಲದಿಂದ ನಮ್ಮನ್ನು ಮುಗಿಸುವ ತಂತ್ರಗಾರಿಕೆ ನಡೆಸುತ್ತಿವೆ. ನಮ್ಮ ಬೆನ್ನ ಹಿಂದೆ ದೇವರು ಮತ್ತು ಜನರಿದ್ದಾರೆ. ನೋಡೋಣ ನಡೆಯಿರಿ ಎಂದು ಮಾತಿಗೆ ವಿರಾಮವಿಟ್ಟರು.