ಅರಕಲಗೂಡು (ಹಾಸನ): ತಾಲೂಕಿನ ಅರೇ ಮಾದನಹಳ್ಳಿ ಬಳಿ ಹೇಮಾವತಿ ಬಲ ಮೇಲ್ದಂಡೆ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಶಾಸಕ ಎ.ಟಿ.ರಾಮಸ್ವಾಮಿ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲಾ ವ್ಯಾಪ್ತಿಯ 210 ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಜನ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಿ, ಅಂತರ್ಜಲ ವೃದ್ಧಿಯಾಗಲಿದೆ. ಜಲಾಶಯದ ಎಲ್ಲ ನಾಲೆಗಳಿಗೂ ಒಟ್ಟಿಗೆ ನೀರು ಹರಿಸಿದರೆ ಬಲ ಮೇಲ್ದಂಡೆ ನಾಲೆಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಈ ಕುರಿತು ಸರ್ಕಾರಕ್ಕೆ ತಾವು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ 20 ದಿನ ಮೊದಲು ನಾಲೆಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
96 ಕಿ.ಮೀ ಉದ್ದದ ಈ ನಾಲೆಯು 56 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ನಾಲೆ ಆಧುನೀಕರಣಕ್ಕೆ ಸರ್ಕಾರ ರೂ 380 ಕೋಟಿ ಹಣ ಬಿಡುಗಡೆ ಮಾಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ನೀರಿನ ಲಭ್ಯತೆ ಆಧರಿಸಿ ನೀರು ಬಿಡುವ ಕಾರಣ ರೈತರು ಭತ್ತದ ಬೆಳೆ ಮಾಡದೆ ಅರೆ ನೀರಾವರಿ ಬೆಳೆಗಳನ್ನು ಬೆಳೆಯುವಂತೆ ಸಲಹೆ ನೀಡಿದರು.