ಹಾಸನ: ಸರ್ಕಾರ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡದಿದ್ದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಮಿತಿ ಅಧ್ಯಕ್ಷೆ ಸ್ವರ್ಣ ಭಟ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಸಾವಿರಾರು ಮಹಿಳೆಯರ ನೇತೃತ್ವದಲ್ಲಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಮಿತಿಯು ಸುಮಾರು ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧವಾಗಬೇಕು ಎಂಬ ಹಕ್ಕೊತ್ತಾಯವನ್ನು ಇಟ್ಟುಕೊಂಡು ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
ಆರು ತಿಂಗಳ ಹಿಂದೆ ಮೂರು ಸಾವಿರ ಮಹಿಳೆಯರು ಪಾದಯಾತ್ರೆ ಮೂಲಕ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದರೂ ಸಹ ಸರ್ಕಾರ ಮಹಿಳೆಯರಿಗೆ ಕಿಂಚಿತ್ತೂ ಗೌರವ ನೀಡಿಲ್ಲ ಆದ್ದರಿಂದ ಮಹಿಳೆಯರು ಸೇರಿ ಮುಂದಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಚಳವಳಿ ಕೇವಲ ರಾಜ್ಯದ ಚಳವಳಿಯಾಗಿ ಉಳಿಯದೇ ರಾಷ್ಟ್ರಮಟ್ಟದ ಚಿಂತಕರು ಈ ಹೋರಾಟವನ್ನು ಬೆಂಬಲಿಸಿ ಭಾಗವಹಿಸಲಿದ್ದಾರೆ ಎಂದರು.
ಚಳವಳಿಯ ಬೇಡಿಕೆಗಳಲ್ಲಿ ಸಂವಿಧಾನದ 73ನೇ ತಿದ್ದುಪಡಿಯ ಆಶಯವನ್ನು ಅನುಷ್ಠಾನಗೊಳಿಸುವುದಾಗಿ ಇದೆ. ಗ್ರಾಮ ಪಂಚಾಯಿತಿಗಳು ಗ್ರಾಮಸಭೆ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳು ಇರಬಾರದೆಂದು ನಿರ್ಧಾರ ತೆಗೆದುಕೊಳ್ಳಬಹುದು ಈಗಾಗಲೇ ಗ್ರಾಮಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಗ್ರಾಮಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಬೇಕು ಎಂಬುದು ಪ್ರಮುಖವಾದದ್ದಾಗಿದೆ.
ನೆರೆಯ ರಾಜ್ಯ ಆಂಧ್ರಪ್ರದೇಶ ಮಾದರಿಯಲ್ಲಿ ಮದ್ಯ ನಿಷೇಧ ಮಾಡಿದರೆ ಹೆಚ್ಚು ಅನುಕೂಲವಾಗಲಿದೆ . ಅಲ್ಲದೇ ಇದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೂಪಾ ಹಾಸನ , ಕಾಮಾಕ್ಷಿ, ಅಹಮದ್ ಆಲಿ ಖಾನ್, ಪ್ರದೀಪ್,ಸಮೀರ್ ಆಹಮದ್ ಇತರರು ಇದ್ದರು.